ಮಧ್ಯಪ್ರದೇಶ : ಆಸ್ಪತ್ರೆಯಲ್ಲಿ 8 ನವಜಾತ ಶಿಶುಗಳ ಮೃತ್ಯು

ಶಾಡೋಲ್ (ಮಧ್ಯಪ್ರದೇಶ): ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಲ್ಲಿ ಎಂಟು ನವಜಾತ ಶಿಶುಗಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಾವಿಗೆ ಕಾರಣವಾದ ಅಂಶಗಳ ಪತ್ತೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶಿಸಿದ್ದಾರೆ.
ಆಸ್ಪತ್ರೆಯ ಅಸ್ವಸ್ಥ ನವಜಾತ ಶಿಶು ಆರೈಕೆ ಘಟಕ (ಎಸ್‌ಎನ್‌ಸಿಯು) ಮತ್ತು ಮಕ್ಕಳ ತೀವ್ರ ನಿಗಾ ಘಟಕ (ಪಿಐಸಿಯು)ದಲ್ಲಿ ಈ ಸಾವುಗಳು ಸಂಭವಿಸಿವೆ. ಮೃತಪಟ್ಟ ಮಕ್ಕಳು ಬುಡಕಟ್ಟು ಜನಾಂಗದವರೇ ಅಧಿಕ ಇರುವ ಶಾಡೋಲ್, ಉಮರಿಯಾ ಮತ್ತು ಅನುಪ್ಪೂರ್ ಜಿಲ್ಲೆಗೆ ಸೇರಿದವರು.
ಅನಿಯಂತ್ರಿತ ನ್ಯುಮೋನಿಯಾ ಮತ್ತು ಉಸಿರಾಟದ ಸಂಕೀರ್ಣತೆಗಳಿಂದ ಬಹುತೇಕ ಮಕ್ಕಳು ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಆರೋಗ್ಯ ಸಚಿವ ಡಾ.ಪ್ರಭುರಾಮ್ ಚೌಧರಿ ಹೇಳಿದ್ದಾರೆ.
"ಮುಖ್ಯಮಂತ್ರಿ ಆದೇಶದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮುಹಮ್ಮದ್ ಸುಲೈಮಾನ್ ಅವರಿಗೆ ಶಾಡೋಲ್ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಮಕ್ಕಳ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಈ ಸಾವಿಗೆ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವೇ ಎಂದು ಪತ್ತೆ ಮಾಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಗತ್ಯವಿದ್ದಲ್ಲಿ ಜಬಲ್ಪುರದಿಂದ ಶಾಡೋಲ್‌ಗೆ ತಜ್ಞ ವೈದ್ಯರನ್ನು ಕಳುಹಿಸುವಂತೆಯೂ ಅವರು ಸಲಹೆ ಮಾಡಿದ್ದಾರೆ.
ಕಳೆದ ಜನವರಿಯಲ್ಲಿ ಆರು ದಿನದಿಂದ ಆರು ತಿಂಗಳು ಪ್ರಾಯದ ಆರು ಬುಡಕಟ್ಟು ಮಕ್ಕಳು ಇದೇ ಆಸ್ಪತ್ರೆಯಲ್ಲಿ 15 ಗಂಟೆಯೊಳಗೆ ಮೃತಪಟ್ಟಿದ್ದವು.







