ಕೋವಿಡ್ ಲಸಿಕೆ ಬಳಕೆಗೆ ಅನುಮೋದನೆ ನೀಡಿದ ವಿಶ್ವದ ಮೊದಲ ದೇಶ ಯಾವುದು ಗೊತ್ತಾ?

ಲಂಡನ್ : ಫಿಝರ್-ಬಯೋಎನ್‍ಟೆಕ್ ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆ ಬಳಕೆಗೆ ಬುಧವಾರ ಅನುಮೋದನೆ ನೀಡಿದ ಬ್ರಿಟಿಷ್ ಸರಕಾರ, ಕೋವಿಡ್ ಲಸಿಕೆ ಬಳಕೆಗಾಗಿ ಅನುಮೋದನೆ ನೀಡಿದ ಜಗತ್ತಿನ ಪ್ರಥಮ ರಾಷ್ಟ್ರವಾಗಿದೆ. ಮುಂದಿನ ವಾರದಿಂದ ಲಸಿಕೆ ದೇಶದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
ದೇಶದ ಔಷಧಿಗಳ ಮತ್ತು ಆರೋಗ್ಯಸೇವಾ ಉತ್ಪನ್ನಗಳ ನಿಯಂತ್ರಣಾ ಏಜನ್ಸಿ (ಎಂಎಚ್‍ಆರ್‍ಎ) ಶಿಫಾರಸುಗಳನ್ನು ಸರಕಾರ ಇಂದು ಒಪ್ಪಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಯಾವ ಆದ್ಯತಾ ಗುಂಪುಗಳಿಗೆ ಈ ಲಸಿಕೆ ಮೊದಲು ಲಭ್ಯವಾಗಬೇಕೆನ್ನುವ ಕುರಿತಂತೆ ಇಂಗ್ಲೆಂಡ್‍ನ ಲಸಿಕೆ ಸಮಿತಿ ನಿರ್ಧರಿಸಲಿದೆ. ಈ ಲಸಿಕೆ ಶೇ. 90ಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಮೆರಿಕಾ ಮೂಲದ ಫಿಝರ್ ಹಾಗೂ ಅದರ ಜರ್ಮನ್ ಪಾಲುದಾರ ಸಂಸ್ಥೆ ಬಯೋಎನ್‍ಟೆಕ್ ಈಗಾಗಲೇ ಹೇಳಿವೆ.
ಇಂಗ್ಲೆಂಡ್‍ನಲ್ಲಿ ಈ ಲಸಿಕೆ ಬಳಕೆಗೆ ದೊರೆತ ಅನುಮತಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಒಂದು ಐತಿಹಾಸಿಕ ಕ್ಷಣ ಎಂದು ಫಿಝರ್ ಹೇಳಿದೆ ಹಾಗೂ ತಕ್ಷಣ ಇಂಗ್ಲೆಂಡ್‍ಗೆ ಲಸಿಕೆಗಳ ಪೂರೈಕೆ ಆರಂಭಿಸುವುದಾಗಿ ಹೇಳಿದೆ. ಸದ್ಯ ಲಭ್ಯ ಲಸಿಕೆಗಳು ಸೀಮಿತವಾಗಿರುವುದರಿಂದ ಅವುಗಳ ಉತ್ಪಾದನೆ ಮುಂದಿನ ತಿಂಗಳುಗಳಲ್ಲಿ ಹೆಚ್ಚಿಸಲಾಗುವ ನಿರೀಕ್ಷೆಯಿದೆ.
ಅಸ್ಟ್ರಾಝೆನೆಕಾ ಮತ್ತು ಆಕ್ಸ್‌ಫರ್ಡ್ ವಿವಿ ಅಭಿವೃದ್ಧಿ ಪಡಿಸುತ್ತಿರುವ ಇನ್ನೊಂದು ಲಸಿಕೆಯನ್ನು ಪರಿಗಣಿಸುವ ನಿಟ್ಟಿನಲ್ಲೂ ಇಂಗ್ಲೆಂಡ್ ಸರಕಾರ ಪರಿಶೀಲಿಸುತ್ತಿದೆ.







