ಅರ್ನಬ್‍ಗೆ ಜಾಮೀನು ಸಿದ್ದೀಕ್ ಕಪ್ಪನ್‍ಗೆ ಏಕಿಲ್ಲ: ಸಿಬಲ್ ಪ್ರಶ್ನೆಗೆ ಸಿಜೆಐ ಬೋಬ್ಡೆ ಪ್ರತಿಕ್ರಿಯಿಸಿದ್ದು ಹೀಗೆ...

ಹೊಸದಿಲ್ಲಿ : ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯ ಜಾಮೀನು ಮನವಿ ಕೆಳಗಿನ ಹಂತದ ನ್ಯಾಯಾಲಯದಲ್ಲಿ ಬಾಕಿಯಿದ್ದರೂ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತೆಂಬುದನ್ನು ಬಂಧಿತ ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ವಕೀಲ ಕಪಿಲ್ ಸಿಬಲ್ ಇಂದು ನ್ಯಾಯಾಲಯದ ಗಮನ ಸೆಳೆದಾಗ “ಪ್ರತಿಯೊಂದು ಪ್ರಕರಣವೂ ಭಿನ್ನ'' ಎಂದು ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ ಸ್ಪಷ್ಟೀಕರಣ ನೀಡಿದ್ದಾರೆ.
ಹತ್ರಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದ ವೇಳೆ ಬಂಧನಕ್ಕೊಳಗಾಗಿ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯನ್ವಯ ಪ್ರಕರಣ ಎದುರಿಸುತ್ತಿರುವ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಇನ್ನೂ ಜೈಲಿನಲ್ಲಿಯೇ ಇದ್ದು ಇಂದು ಅವರ ಪ್ರಕರಣದ ವಿಚಾರಣೆಯನ್ನು ಸಿಜೆಐ ಬೋಬ್ಡೆ ಮುಂದಿನ ವಾರದ ತನಕ ಮುಂದೂಡಿರುವುದರಿಂದ ಕಪ್ಪನ್ ಅವರು ಅಲ್ಲಿಯ ತನಕ ಉತ್ತರ ಪ್ರದೇಶದ ಜೈಲಿನಲ್ಲಿಯೇ ಇರಬೇಕಾಗಿದೆ.
ಇಂದಿನ ವಿಚಾರಣೆ ವೇಳೆ ಕಪ್ಪನ್ ಅವರಿಗೆ ಜಾಮೀನು ಕೋರಿ ಹೈಕೋರ್ಟ್‍ಗೆ ಅಪೀಲು ಸಲ್ಲಿಸುವಂತೆ ಸಿಜೆಐ ಸೂಚಿಸಿದಾಗ ಪ್ರತಿಕ್ರಿಯಿಸಿದ ಅವರ ವಕೀಲರಾದ ಕಪಿಲ್ ಸಿಬಲ್ ``ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ಜಾಮೀನು ಮನವಿ ಕೆಳಗಿನ ನ್ಯಾಯಾಲಯದಲ್ಲಿ ಬಾಕಿಯಿದ್ದರೂ ಅವರ ಜಾಮೀನು ಅರ್ಜಿಯನ್ನು ಈ ನ್ಯಾಯಾಲಯ ಪುರಸ್ಕರಿಸಿತ್ತು,'' ಎಂದರು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಿಜೆಐ ಬೋಬ್ಡೆ ‘’ಪ್ರತಿಯೊಂದು ಪ್ರಕರಣವೂ ಭಿನ್ನ’’ ಎಂದರು.
ಪ್ರಕರಣದ ವಿಚಾರಣೆಯನ್ನು ಮುಂದೂಡದಂತೆ ಕಪಿಲ್ ಸಿಬಲ್ ಕೇಳಿಕೊಂಡರೂ ಪೀಠದ ಇತರ ನ್ಯಾಯಮೂರ್ತಿಗಳಾದ ಎ. ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಹ್ಮಣಿಯನ್ ಕೂಡ ಈ ಮನವಿಯನ್ನು ಮನ್ನಿಸಲಿಲ್ಲ.







