ಮೂರನೇ ಏಕದಿನ: ಆಸ್ಟ್ರೇಲಿಯ ವಿರುದ್ದ ಭಾರತಕ್ಕೆ ರೋಚಕ ಜಯ
ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ

ಸ್ಮಿತ್ ಸಹಿತ ಮೂವರು ಬ್ಯಾಟ್ಸ್ ಮನ್ ಗಳಿಗೆ ಪೆವಿಲಿಯನ್ ದಾರಿ ತೋರಿಸಿರುವ ಶಾರ್ದೂಲ್ ಠಾಕೂರ್.
ಕ್ಯಾನ್ ಬೆರಾ: ಆಸ್ಟ್ರೇಲಿಯ ವಿರುದ್ಧ ಬುಧವಾರ ಇಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಭಾರತ ತಂಡ 13 ರನ್ ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿತು. ಈ ಮೂಲಕ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 302 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯ ತಂಡ 49.3 ಓವರ್ ಗಳಲ್ಲಿ 289 ರನ್ ಗಳಿಸಿ ಆಲೌಟಾಯಿತು.
ಆಸ್ಟ್ರೇಲಿಯದ ಪರವಾಗಿ ನಾಯಕ ಆ್ಯರೊನ್ ಫಿಂಚ್(75, 82 ಎಸೆತ, 7 ಬೌಂಡರಿ, 3 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಆಲ್ ರೌಂಡರ್ ಮ್ಯಾಕ್ಸ್ ವೆಲ್ (59, 38 ಎಸೆತ, 3 ಬೌಂಡರಿ, 4 ಸಿಕ್ಸರ್) ಅರ್ಧಶತಕದ ಕೊಡುಗೆ ನೀಡಿದರು. ಕಳೆದ 2 ಪಂದ್ಯಗಳಲ್ಲಿ ಸತತ ಶತಕ ಸಿಡಿಸಿದ್ದ ಸ್ಟೀವನ್ ಸ್ಮಿತ್ ಇಂದು ಕೇವಲ 7 ರನ್ ಗಳಿಸಿ ಶಾರ್ದೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು.
ಭಾರತದ ಬೌಲಿಂಗ್ ವಿಭಾಗದಲ್ಲಿ ಶಾರ್ದೂಲ್ ಠಾಕೂರ್ (3-51) ಯಶಸ್ವಿ ಬೌಲರ್ ಎನಿಸಿಕೊಂಡರು. ಜಸ್ ಪ್ರೀತ್ ಬುಮ್ರಾ(2-43) ಹಾಗೂ ನಟರಾಜನ್ (2-70) ತಲಾ ಎರಡು ವಿಕೆಟ್ ಪಡೆದರು.
ಈಗಾಗಲೇ ಸರಣಿಯನ್ನು ಕಳೆದುಕೊಂಡಿರುವ ಭಾರತಕ್ಕೆ ಈ ಗೆಲುವು ಡಿಸೆಂಬರ್ 4ರಿಂದ ಆರಂಭವಾಗಲಿರುವ 3 ಪಂದ್ಯಗಳ ಟ್ವೆಂಟಿ-20 ಸರಣಿಗೆ ಆತ್ಮವಿಶ್ವಾಸವನ್ನು ಒದಗಿಸಿದೆ.







