12 ವರ್ಷದ ಬಾಲಕಿಯ ಹತ್ಯೆ: ಕಬ್ಬಿನ ಗದ್ದೆಯಲ್ಲಿ ಶವ ಪತ್ತೆ
ರಾಜ್ಯದಲ್ಲಿ ನಡೆದ ಘಟನೆ

ಮಂಡ್ಯ, ಡಿ.2: ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿ ಬಳ್ಳಾರಿ ಮೂಲದ ಅಪ್ರಾಪ್ತ ಬಾಲಕಿಯನ್ನು ಕುಡುಗೋಲಿನಿಂದ ಕತ್ತುಕೊಯ್ದು ಹತ್ಯೆಗೈದಿರುವ ದಾರುಣ ಘಟನೆ ಮದ್ದೂರು ತಾಲೂಕು ಹುರುಗಲವಾಡಿ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ಹಾಡಹಗಲೇ ನಡೆದಿದೆ.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಕಾಳಬಸಾಪುರ ತಾಂಡಾದ ಪಾಂಡುನಾಯಕ್ ಅವರ ಪುತ್ರಿ ಆರತಿಬಾಯಿ(12) ಹತ್ಯೆಯಾಗಿರುವ ಬಾಲಕಿ.
ಕೊಪ್ಪ ಬಳಿಯ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಕಡಿಯಲು ಬಳ್ಳಾರಿಯಿಂದ ಬಂದಿರುವ ಕೂಲಿ ಕಾರ್ಮಿಕ ಕುಟುಂಬದವರು ಈ ಬಾಲಕಿಯನ್ನು ತಮ್ಮ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಜತೆಯಲ್ಲಿ ಕರೆತಂದಿದ್ದರು ಎನ್ನಲಾಗಿದೆ.
ಹುರುಗಲವಾಡಿ ಗ್ರಾಮದ ಅಪ್ಪಾಜಿ ಅವರ ಪುತ್ರ ಆಕಾಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಕಬ್ಬಿನ ಗದ್ದೆಯಲ್ಲಿ ಅವಿತು ಕುಳಿತಿದ್ದ ಆತನನ್ನು ಕಬ್ಬು ಕಡಿಯುತ್ತಿದ್ದವರು ಹಿಡಿದು ಕೊಪ್ಪ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಬ್ಬು ಕಡಿಯುವ ಬಳ್ಳಾರಿ ಮೂಲದ ಕಾರ್ಮಿಕರು ಹುರುಗಲವಾಡಿ ಗ್ರಾಮದ ಹೊರಹೊಲಯದ ತೋಟದಲ್ಲಿರುವ ಗ್ರಾಮದ ಅಪ್ಪಾಜಿ ಅವರ ಹಸು ಸಾಕಾಣೆ ಮನೆಯ ಸಮೀಪ ಟೆಂಟ್ ಹಾಕಿಕೊಂಡು ಕಬ್ಬು ಕಡಿಯುವ ಕೆಲಸ ಮಾಡುತ್ತಿದ್ದರು. ಮಹಿಳಾ ಕೂಲಿಕಾರ್ಮಿಕರು ಟೆಂಟ್ ಬಳಿ ತೆಂಗಿನಗರಿಯಿಂದ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಸ್ನಾನದ ಮನೆಯಲ್ಲಿ ಸ್ನಾನ ಮಾಡುವುದನ್ನು ಅಪ್ಪಾಜಿ ಅವರ ಪುತ್ರ ಆರೋಪಿ ಆಕಾಶ್ ಕದ್ದುಮುಚ್ಚಿ ನೋಡುತ್ತಿದ್ದ ಎನ್ನಲಾಗಿದೆ.
ಇದರಿಂದ ಬೇಸತ್ತ ಕೂಲಿ ಕಾರ್ಮಿಕರು ಸಮೀಪದ ಉಜ್ಜನಿಚನ್ನನದೊಡ್ಡಿ ಗ್ರಾಮದ ಬಳಿ ಟೆಂಟ್ ಸ್ಥಳಾಂತರ ಮಾಡಿ ಕಬ್ಬು ಕಡಿಯಲು ತೆರಳುತ್ತಿದ್ದರು. ಇಂದು(ಬುಧವಾರ) ಹುರುಗಲವಾಡಿ ಗ್ರಾಮದ ಬೆಟ್ಟೇಗೌಡರ ಕಬ್ಬಿನಗದ್ದೆಯಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ ಈ ಕೃತ್ಯ ನಡೆದಿದೆ.
ಕಬ್ಬು ಕಟಾವು ಮಾಡುತ್ತಿದ್ದ ಮಹಿಳೆ ತನ್ನ ಮಗುವಿಗೆ ಹಾಲುಣಿಸಲು ತೆರಳಿದ್ದಾಳೆ. ಮಗು ನೋಡಿಕೊಳ್ಳುತ್ತಿದ್ದ ಬಾಲಕಿ ಆರತಿಬಾಯಿ ಕಬ್ಬು ಕಟಾವು ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದು, ಅಲ್ಲಿಗೆ ಬಂದ ಯುವಕ ಅತ್ಯಾಚಾರಕ್ಕೆ ಯತ್ನಿಸಿ, ನಿರಾಕರಿಸಿದಾಗ ಆಕೆಯ ಕೈಯಲ್ಲೇ ಇದ್ದ ಕುಡುಗೋಲಿನಿಂದ ಕತ್ತುಕೊಯ್ದು ಪರಾರಿಯಾದ ಎಂದು ತಿಳಿದು ಬಂದಿದೆ.
ಆಕಾಶ್ ಈ ಕೃತ್ಯ ನಡೆಸಿರಬಹುದೆಂದು ಶಂಕಿಸಿರುವ ಕೊಪ್ಪ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ, ಮಳವಳ್ಳಿ ಡಿವೈಎಸ್ಪಿ ಪೃಥ್ವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.







