ಕಳಪೆ ವಾಯು ಗುಣಮಟ್ಟದ ನಗರಗಳಲ್ಲಿ ಪಟಾಕಿಗಳಿಗೆ ಸಂಪೂರ್ಣ ನಿಷೇಧ ಹೇರಿದ ಎನ್ಜಿಟಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಡಿ.2: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್ಜಿಟಿ)ವು ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಾಯು ಗುಣಮಟ್ಟವು ಕಳಪೆಯಾಗಿರುವ ದಿಲ್ಲಿ-ರಾಷ್ಟ್ರ ರಾಜಧಾನಿ ಪ್ರದೇಶ ಮತ್ತು ಇತರ ನಗರಗಳು ಹಾಗೂ ಪಟ್ಟಣಗಳಲ್ಲಿ ಎಲ್ಲ ಬಗೆಯ ಪಟಾಕಿಗಳ ಮಾರಾಟ ಮತ್ತು ಬಳಕೆಯ ನಿಷೇಧವನ್ನು ವಿಸ್ತರಿಸಿ ಬುಧವಾರ ಆದೇಶಿಸಿದೆ.
ಈ ಹಿಂದೆ ನ.10 ಮತ್ತು ನ.30ರ ನಡುವಿನ ಅವಧಿಗೆ ಇಂತಹುದೇ ನಿಷೇಧ ಹೇರಲಾಗಿತ್ತು. ಆದರೆ ನ್ಯಾಯಾಧಿಕರಣದ ಅಧ್ಯಕ್ಷ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಪೀಠವು ವಾಯು ಗುಣಮಟ್ಟವು ಮಧ್ಯಮವಾಗಿರುವ ಸ್ಥಳಗಳಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಸಂದರ್ಭ ರಾತ್ರಿ 11:55ರಿಂದ ನಸುಕಿನ 12:30ರವರೆಗೆ ಹಸಿರು ಪಟಾಕಿಗಳ ಬಳಕೆಗೆ ಅನುಮತಿ ನೀಡಿದೆ.
ವಾಯು ಗುಣಮಟ್ಟ ಸೂಚಿಯು ಶೂನ್ಯ ಮತ್ತು 50ರ ನಡುವೆ ಇದ್ದರೆ ಅದನ್ನು 'ಉತ್ತಮ', 51ರಿಂದ 100ರವರೆಗಿದ್ದರೆ 'ತೃಪ್ತಿಕರ',101ರಿಂದ 200ರ ನಡುವೆ ಇದ್ದರೆ 'ಮಧ್ಯಮ' ಹಾಗೂ 201ರಿಂದ 300ರ ನಡುವೆ ಇದ್ದರೆ 'ಕಳಪೆ' ಎಂದು ಪರಿಗಣಿಸಲಾಗುತ್ತದೆ. ಸೂಚಿಯು 300ರಿಂದ 400ರ ನಡುವೆ ಇದ್ದರೆ ವಾಯು ಗುಣಮಟ್ಟವು 'ಅತ್ಯಂತ ಕಳಪೆ' ಮತ್ತು 400ರಿಂದ 500ರ ನಡುವೆ ಇದ್ದರೆ 'ಗಂಭೀರ ' ಎಂದು ವ್ಯಾಖ್ಯಾನಿಸಲಾಗಿದೆ.
ನಿಷೇಧಿತ ಪಟಾಕಿಗಳು ಮಾರಾಟವಾಗದಂತೆ ನೋಡಿಕೊಳ್ಳುವಂತೆ ಎಲ್ಲ ಜಿಲ್ಲಾ ದಂಡಾಧಿಕಾರಿಗಳಿಗೆ ನಿರ್ದೇಶನ ನೀಡಿರುವ ಎನ್ಜಿಟಿ,ಆದೇಶವನ್ನು ಉಲ್ಲಂಘಿಸುವವರಿಂದ ದಂಡವನ್ನು ವಸೂಲು ಮಾಡುವಂತೆ ಸೂಚಿಸಿದೆ.







