ಆಟೊ ರಿಕ್ಷಾದಲ್ಲಿ ಗಾಂಜಾ ಸಾಗಾಟ: ಆರೋಪಿಯ ಬಂಧನ

ಪುತ್ತೂರು, ಡಿ.3: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಸಂಪ್ಯ ಠಾಣೆಯ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು ಮಂಜನಾಡಿ ಕುಚ್ಚಿಗುಡ್ಡೆ ನಿವಾಸಿ ಹಾತಿಮ್(32) ಬಂಧಿತ ಆರೋಪಿ. ಆತನಿಂದ ರೂ.42,600 ಮೌಲ್ಯದ 2.130 ಕೆಜಿ ತೂಕದ ಗಾಂಜಾ, ಮೊಬೈಲ್ ಫೋನ್, 5,900 ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ ಮೌಲ್ಯದ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಟೋ ರಿಕ್ಷಾವೊಂದರಲ್ಲಿ ಸುಳ್ಯಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆದಿದೆ. ಪೊಲೀಸರು ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಂಗಳೂರು ನೋಂದಣಿಯ ಅಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ರಿಕ್ಷಾ ಚಾಲಕ ಹಾತಿಮ್ ಪರಾರಿಯಾಗಲು ಯತ್ನಿಸಿದನೆನ್ನಲಾಗಿದೆ. ಕೂಡಲೇ ಆತನನ್ನು ಸುತ್ತುವರಿದು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಸೈ ಉದಯರವಿ ನೇತೃತ್ವದ ಕಾರ್ಯಾಚರಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಅದ್ರಾಮ, ಚಂದ್ರ, ಸಿಬ್ಬಂದಿಯಾದ ನಿತಿನ್, ವಿನೋದ್ ಭಾಗವಹಿಸಿದ್ದರು.