ಭಾರತದಲ್ಲಿ ಕೋವಿಡ್-ಲಸಿಕೆ ಲಭ್ಯವಾಗಿಸಲು ಬದ್ಧ: ಫೈಝರ್
ಹೊಸದಿಲ್ಲಿ,ಡಿ.3: ಭಾರತದಲ್ಲಿ ಫೈಝರ್/ಬಯೊಎನ್ಟೆಕ್ ಕೋವಿಡ್-19 ಲಸಿಕೆಯನ್ನು ಲಭ್ಯವಾಗಿಸಲು ಅವಕಾಶಗಳನ್ನು ಅನ್ವೇಷಿಸಲು ಭಾರತ ಸರಕಾರದೊಂದಿಗೆ ಕೈಜೋಡಿಸಲು ತಾನು ಬದ್ಧವಿರುವುದಾಗಿ ಪ್ರಮುಖ ಜಾಗತಿಕ ಔಷಧಿ ತಯಾರಿಕೆ ಕಂಪನಿ ಫೈಝರ್ ಗುರುವಾರ ಹೇಳಿದೆ.
ಫೈಝರ್ ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ನ ಔಷಧಿ ನಿಯಂತ್ರಣ ಪ್ರಾಧಿಕಾರವು ಗುರುವಾರ ತಾತ್ಕಾಲಿಕ ಅನುಮತಿಯನ್ನು ನೀಡಿದ್ದು,ಇದರೊಂದಿಗೆ ಬ್ರಿಟನ್ ಫೈಝರ್ ಲಸಿಕೆಗೆ ಅಸ್ತು ಎಂದಿರುವ ವಿಶ್ವದ ಮೊದಲ ದೇಶವಾಗಿದೆ.
‘ನಾವು ಸದ್ಯ ವಿಶ್ವದ ಹಲವಾರು ಸರಕಾರಗಳೊಂದಿಗೆ ಚರ್ಚೆಗಳನ್ನು ನಡೆಸುತ್ತಿದ್ದೇವೆ ಮತ್ತು ಭಾರತದಲ್ಲಿ ಲಸಿಕೆಯನ್ನು ಲಭ್ಯವಾಗಿಸುವ ಅವಕಾಶಗಳನ್ನು ಕಂಡುಕೊಳ್ಳಲು ಸರಕಾರದೊಂದಿಗೆ ಕೈಜೋಡಿಸುವುದಕ್ಕೆ ಬದ್ಧವಾಗಿದ್ದೇವೆ ’ಎಂದು ಕಂಪನಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಂಕ್ರಾಮಿಕದ ಈ ಹಂತದಲ್ಲಿ ಕಂಪನಿಯು ಆಯಾ ಸರಕಾರಗಳೊಂದಿಗೆ ಒಪ್ಪಂದಗಳ ಆಧಾರದಲ್ಲಿ ಸರಕಾರಿ ಗುತ್ತಿಗೆಗಳ ಮೂಲಕ ಮಾತ್ರ ಲಸಿಕೆಯನ್ನು ಪೂರೈಸಲಿದೆ ಎಂದು ಅವರು ಹೇಳಿದ್ದಾರೆ.
ಫೈಝರ್ ಲಸಿಕೆಯು ದೇಶದಲ್ಲಿ ಲಭ್ಯವಾಗಲು ಕೆಲವು ತಿಂಗಳುಗಳ ಕಾಲಾವಕಾಶ ಬೇಕಾಗಬಹುದು ಎಂದು ಕೋವಿಡ್-19 ಕುರಿತು ರಾಷ್ಟ್ರೀಯ ಕಾರ್ಯಪಡೆಯ ಮುಖ್ಯಸ್ಥರೂ ಆಗಿರುವ ನೀತಿ ಆಯೋಗದ ಸದಸ್ಯ(ಆರೋಗ್ಯ) ವಿ.ಕೆ.ಪಾಲ್ ಅವರು ನವಂಬರ್ನಲ್ಲಿ ತಿಳಿಸಿದ್ದರು.