ಜನವರಿಯಿಂದ ತರಗತಿಗಳ ಪುನರಾರಂಭಕ್ಕೆ ಅನುಮತಿ ಕೋರಿ ಮುಖ್ಯಮಂತ್ರಿಗಳಿಗೆ ಸಿಐಎಸ್‌ಸಿಇ ಪತ್ರ

ಹೊಸದಿಲ್ಲಿ,ಡಿ.3: ಶಾಲೆಗಳನ್ನು, ವಿಶೇಷವಾಗಿ 10 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಜ.4ರಿಂದ ತರಗತಿಗಳನ್ನು ಪುನರಾರಂಭಿಸಲು ಅನುಮತಿ ಕೋರಿ ಕೌನ್ಸಿಲ್ ಆಫ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಝಾಮಿನೇಶನ್ಸ್ (ಸಿಐಎಸ್‌ಸಿಇ) ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆದಿದೆ. ಕೋವಿಡ್ ವೈರಸ್ ಹರಡುವಿಕೆಯನ್ನು ತಡೆಯಲು ರಾಜ್ಯ ಸರಕಾರದ ನಿರ್ದೇಶಗಳು ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ಅದು ಭರವಸೆ ನೀಡಿದೆ. ಪರೀಕ್ಷೆಗಳು, ವಿಶೇಷವಾಗಿ ಬೋರ್ಡ್ ಪರೀಕ್ಷೆಗಳನ್ನು ಬರೆಯಲಿರುವ ವಿದಾರ್ಥಿಗಳಿಗಾಗಿ ತರಗತಿಗಳನ್ನು ನಡೆಸಲಾಗುವುದು. ಬೋರ್ಡ್ ಪರೀಕ್ಷೆಗಳು ಆಫ್‌ಲೈನ್ ಮೂಲಕ ಮಾತ್ರ ನಡೆಯಲಿವೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ಮಾರ್ಚ್‌ನಲ್ಲಿ ಪರೀಕ್ಷೆಗಳು ನಡೆಯಬೇಕಾಗಿದ್ದು, ವಿಳಂಬವಾದರೆ ಪಿಯುಸಿಗೆ ಸೇರುವ 10ನೇ ಕ್ಲಾಸಿನ ವಿದ್ಯಾರ್ಥಿಗಳ ಕಳವಳಕ್ಕೆ ಕಾರಣವಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಈಗ ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಪ್ರಾಕ್ಟಿಕಲ್ ಪರೀಕ್ಷೆಗಳಿಗಾಗಿ ವರ್ಚುವಲ್ ಲ್ಯಾಬರೇಟರಿಗಳಿಗೂ ಅವರು ಹಾಜರಾಗುತ್ತಿದ್ದಾರೆ.
ವಿದ್ಯಾರ್ಥಿಗಳು ಮಾರ್ಚ್ ನಂತರ ಇದೇ ಮೊದಲ ಬಾರಿಗೆ ಆನ್‌ಲೈನ್‌ನಿಂದ ಹೊರಬಂದು ತಮ್ಮ ಶಿಕ್ಷಕರಿಂದ ನೇರವಾಗಿ ಪಾಠಗಳನ್ನು ಕಲಿಯಲಿದ್ದಾರೆ.
ಡಿಸೆಂಬರ್‌ವರೆಗೆ ಶಾಲೆಗಳನ್ನು ಪುನರಾರಂಭಿಸುವಂತಿಲ್ಲ ಎಂದು ರಾಜ್ಯ ಸರಕಾರಗಳು ಪ್ರಕಟಿಸಿದ ಬಳಿಕ ಸಿಐಎಸ್‌ಸಿಇ ಈ ಮನವಿಯನ್ನು ಮಾಡಿಕೊಂಡಿದೆ.
ಮಾರ್ಚ್‌ನಲ್ಲಿ ಬೋರ್ಡ್ ಪರೀಕ್ಷೆಗಳನ್ನು ಎದುರಿಸಲು ವಿದ್ಯಾಥಿಗಳು ಮಾನಸಿಕವಾಗಿ ಸಜ್ಜಾಗಿದ್ದಾರೆ ಎಂದು ತಿಳಿಸಿದ ಕರ್ನಾಟಕ ರಾಜ್ಯ ಐಸಿಎಸ್‌ಇ ಶಾಲೆಗಳ ಸಂಘದ ಮಾಜಿ ಕಾರ್ಯದರ್ಶಿ ಡಾ.ಗಾಯತ್ರಿ ದೇವಿ ಅವರು, ಪರೀಕ್ಷೆ ಮುಂದಕ್ಕೆ ಹೋದರೆ ಅದು ವಿದ್ಯಾರ್ಥಿಗಳಿಗೆ ಸಂಕಷ್ಟವನ್ನುಂಟು ಮಾಡುತ್ತದೆ. ಮಾರ್ಚ್‌ನಲ್ಲಿ ಪರೀಕ್ಷೆಗಳು ನಡೆದರೆ ಅದು ಮುಂದಿನ ತಿಂಗಳಿಗೂ ವಿಸ್ತರಿಸಬಹುದು ಎಂದರು.







