ಬಿಜೆಪಿ ಕಾರ್ಯಕಾರಿಣಿಗೆ ಅಡ್ಡಿಯಾಗದ ಕೊರೋನ ಅಧಿವೇಶನಕ್ಕೆ ಅಡ್ಡಿ ಹೇಗೆ?: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನೆ

ಬೆಳಗಾವಿ, ಡಿ. 4: 'ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಅಡ್ಡಿಯಾಗದ ಕೋವಿಡ್-19 ಸೋಂಕು, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಸಲು ಅಡ್ಡಿಯಾಗುತ್ತದೆಯೇ? ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸದಿರುವುದು ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯಕ್ಕೆ ಕಾರಣವಾಗಿದೆ. ಕಳೆದ ವರ್ಷ ಅಧಿವೇಶನ ನಡೆಸಿಲ್ಲ. ಈ ವರ್ಷವೂ ಅಧಿವೇಶನ ನಡೆಸುವುದಿಲ್ಲ ಎಂದರೆ ಹೇಗೇ? ಎಂದು ಕೇಳಿದರು.
ಸಂತ್ರಸ್ತರ ಅಳಲು ಕೇಳಲು ಸಮಯವಿಲ್ಲ: ಎರಡು ವರ್ಷದಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟದಲ್ಲಿರುವಾಗ ಅವರ ಸಮಸ್ಯ ಕೇಳಲು ಸರಕಾರಕ್ಕೆ ಸಮಯ ಇಲ್ಲ. ಆದರೆ, ಇಲ್ಲಿ ರಾಜ್ಯ ಕಾರ್ಯಕಾರಣಿ ಮಾಡಲು ಅವರಿಗೆ ಸಮಯವಿದೆ. ಈ ಭಾಗಕ್ಕೆ ನಿಮ್ಮ ಕೊಡುಗೆ ಏನು? ಈ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲು 400 ರಿಂದ 500 ಕೋಟಿ ರೂ.ವೆಚ್ಚ ಮಾಡಿದ್ದು, ಇಲ್ಲಿ ಚಳಿಗಾಲದ ಅಧಿವೇಶನವನ್ನು ನಡೆಸುತ್ತಿಲ್ಲ. ಬಿಜೆಪಿಯವರು ರಾಜ್ಯ ಕಾರ್ಯಕಾರಿಣಿ ಸಭೆ ನಡೆಸುತ್ತಿರುವುದನ್ನು ತಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 360 ಕೆರೆಗಳು-ಕಟ್ಟೆ ಒಡೆದಿವೆ, ಸೇತುವೆ-ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಿದರೂ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಇಲಾಖೆಯಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ಕಾರ್ಯಕಾರಿಣಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನೆ ಮಾಡಿದರು.
ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಕೇಂದ್ರದಿಂದ ಜಿಎಸ್ಟಿ ಪಾಲು ಬರುತ್ತಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಕೇಂದ್ರದ ಮೇಲೆ ಕನಿಷ್ಟ ಪಕ್ಷ ಒತ್ತಡವನ್ನು ಹೇರುತ್ತಿಲ್ಲ ಎಂದ ಅವರು, ಕುಶಲಕರ್ಮಿಗಳು, ಚಾಲಕರು, ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಕಾರ್ಮಿಕರಿಗೆ ಪರಿಹಾರ ನೀಡುವ ಭರವಸೆ ನೀಡಿ ಈವರೆಗೂ ಒಂದು ನಯಾಪೈಸೆ ಹಣವನ್ನು ನೀಡಿಲ್ಲ ಎಂದು ದೂರಿದರು.







