ಐಎಂಎ ಬಹುಕೋಟಿ ವಂಚನೆ ಪ್ರಕರಣ: ಮಾಜಿ ಸಚಿವ ರೋಷನ್ ಬೇಗ್‍ಗೆ ಷರತ್ತುಬದ್ಧ ಜಾಮೀನು

ಬೆಂಗಳೂರು, ಡಿ. 5: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪೆನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಮಾಜಿ ಸಚಿವ ಆರ್. ರೋಷನ್ ಬೇಗ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ರೋಷನ್ ಬೇಗ್ ಸಲ್ಲಿಸಿದ್ದ ಅರ್ಜಿಯನ್ನು ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ಶನಿವಾರ ಮಧ್ಯಾಹ್ನ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಆರೋಪಿ ರೋಷನ್ ಬೇಗ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.
'ಇಬ್ಬರು ವ್ಯಕ್ತಿಗಳು ವೈಯಕ್ತಿಕ ಭದ್ರತೆ, ಪಾಸ್‍ಪೋರ್ಟ್ ಅನ್ನು ತನಿಖಾಧಿಕಾರಿಗಳ ವಶಕ್ಕೆ ನೀಡಬೇಕು. ಪ್ರಕರಣ ಮುಗಿಯುವರೆಗೆ ತಿಂಗಳ 2 ಮತ್ತು 4ನೆ ಸೋಮವಾರ ಕಡ್ಡಾಯವಾಗಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಪ್ರಕರಣದ ಮುಂದಿನ ತನಿಖೆಗೆ ಸಹಕಾರ ನೀಡಬೇಕು. ಸಾಕ್ಷ್ಯ ನಾಶಪಡಿಸಬಾರದು ಹಾಗೂ ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರಬಾರದು. ವಿಳಾಸ ಬದಲಿಸಿದರೆ ಅದನ್ನು ತನಿಖಾಧಿಕಾರಿಗಳಿಗೆ ತಿಳಿಸಬೇಕು. ಮುಂದೆ ಇಂತಹ ತಪ್ಪು ಮಾಡಬಾರದು' ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ಹಾಕಿ ಜಾಮೀನು ನೀಡಿದೆ
ಮಾಜಿ ಸಚಿವ ಆರ್.ರೋಷನ್ ಬೇಗ್ ಅವರಿಗೆ ಜಾಮೀನು ನೀಡುವಂತೆ ಕೋರಿ ಬೇಗ್ ಪರ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ಅವರು ವಾದ ಮಂಡಿಸಿದ್ದರು. ಐಎಂಎ ಪ್ರಕರಣದಲ್ಲಿ 35 ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ 36ನೆ ಆರೋಪಿಯಾಗಿರುವ ಆರ್.ರೋಷನ್ ಬೇಗ್, ತನಿಖಾಧಿಕಾರಿಗಳು ನೋಟಿಸ್ ನೀಡಿದಾಗಲೆಲ್ಲಾ ವಿಚಾರಣೆಗೆ ಖುದ್ದು ಹಾಜರಾಗಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಆರೋಪಿಯ ಆರೋಗ್ಯ ಕ್ಷೀಣಿಸಿದ್ದು, ಅವರಿಗೆ ಚಿಕಿತ್ಸೆಯ ಅಗತ್ಯವಿದೆ. ಆದುದರಿಂದ ಅವರಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದರು.
ಐಎಂಎ ಸಂಸ್ಥಾಪಕ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್‍ನಿಂದ ಮಾಜಿ ಸಚಿವ ಆರ್. ರೋಷನ್ ಬೇಗ್ ಅವರು ಅಕ್ರಮವಾಗಿ ಹಣ ಪಡೆದಿದ್ದಾರೆಂಬ ಆರೋಪದಡಿ ನ.22ರಂದು ಸಿಬಿಐ ಬಂಧಿಸಿತ್ತು.







