ವಿಕಲಚೇತನರಿಗೆ ಸರಕಾರಿ ಸೌಲಭ್ಯ ಸದ್ಬಳಕೆಯಾಗಲಿ : ಎಡಿಸಿ ರೂಪಾ
ವಿಶ್ವ ವಿಕಲಚೇತನರ ದಿನಾಚರಣೆ

ಮಂಗಳೂರು, ಡಿ.5: ರಾಜ್ಯ ಸರಕಾರ ವಿಕಲಚೇತನರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಸದ್ಬಳಕೆ ಮಾಡಿ ಕೊಳ್ಳುವುದರೊಂದಿಗೆ ಸ್ವಾವಲಂಬಿಗಳಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಯನ್ಸ್ ಕ್ಲಬ್ ಗಾಂಧಿನಗರ ಹಾಗೂ ವಿಕಲಚೇತನರಿ ಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್‌ನಿಂದಾಗಿ ವಿಶ್ವದ ಪ್ರತಿಯೊಬ್ಬ ನಾಗರಿಕರು ಸಮಸ್ಯೆಗೆ ಈಡಾಗಿದ್ದಾರೆ. ಆರ್ಥಿಕವಾಗಿ ನಷ್ಟ ಉಂಟಾಗಿ ತೊಂದರೆಗೊಳಗಾಗಿದ್ದಾರೆ. ಇವರಲ್ಲಿ ವಿಕಲಚೇತನರು ಇದ್ದು, ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವುದು ವಿಶ್ವಸಂಸ್ಥೆಯ ಮುಖ್ಯ ಉದ್ದೇಶ ಎಂದರು.
ದ.ಕ. ಹಾಗೂ ಉಡುಪಿ ಜಿಲ್ಲೆಗಳ ಚೈತನ್ಯ ವಿವಿದ್ದೋದ್ದೇಶ ಸಂಘದ ಅಧ್ಯಕ್ಷ ಡಾ.ಮುರಳೀಧರ್ ನಾಯಕ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಎಸೆಸೆಲ್ಸಿ ತೇರ್ಗಡೆಯಾದ ವಿಕಲಚೇತನರ ಸಂಖ್ಯೆ ತೀರಾ ಕಡಿಮೆ ಇದೆ. ಸಾಮಾನ್ಯ ವಿದ್ಯಾರ್ಥಿಯಂತೆ ಅಂಗವಿಕಲ ವಿದ್ಯಾರ್ಥಿಗೂ ಸಮಾನ ವಾದ ಅವಕಾಶವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರಾಜ್ಯದಲ್ಲಿ 35 ಲಕ್ಷದಷ್ಟು ವಿಕಲಚೇತನರಿದ್ದು, ಅವರಲ್ಲಿ 8.5 ಲಕ್ಷ ಜನರು ಮಾತ್ರ ಅಂಗವಿಕಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನುಳಿದ ವಿಕಲಚೇತನರೂ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಜಿಲ್ಲಾಡಳಿತ ಎರಡು ತಿಂಗಳಿಗೊಮ್ಮೆ ವಿಕಲಚೇತನರ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇಲಾಖೆಯನ್ನು ಕರೆದು ವಿಕಲಚೇತನರ ಕುಂದುಕೊರತೆಯ ಸಭೆಯನ್ನು ನಡೆಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿಶೇಷ ಚೇತನರಾದ ಪ್ರಶಾಂತ್, ಗಣೇಶ್ ಕಾಮತ್ ಹಾಗೂ ಮೀನಾಕ್ಷಿ ಕೆ. ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಟಿ.ಪಾಪಭೋವಿ, ಕರಾವಳಿ ವಿಕಲಚೇತನರ ಅಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ್, ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ನವೀನ್, ಡಾ.ಸುಜಯ ಭಂಡಾರಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶೀಲಾವತಿ ಹಾಗೂ ವಿಕಲಚೇತನ ಸ್ವಯಂ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿಕಲಚೇತನರು ಉಪಸ್ಥಿತರಿದ್ದರು.