ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದರೆ 1 ಲಕ್ಷ ರೂ. ದಂಡ: ಸುತ್ತೋಲೆ ಹೊರಡಿಸಿದ ಬಿಬಿಎಂಪಿ
ಕೊರೋನ ಎರಡನೇ ಅಲೆ ಭೀತಿ

ಬೆಂಗಳೂರು, ಡಿ.5: ಕೊರೋನ ಸೋಂಕಿನ ಎರಡನೆ ಅಲೆಯ ಭೀತಿ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ದಂಡದ ಮೊತ್ತವನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದ್ದು, ಕಲ್ಯಾಣ ಮಂಟಪ, ಸಮುದಾಯ ಭವನ, ಸಾರ್ವಜನಿಕ ಸ್ಥಳ, ಸ್ಟಾರ್ ಹೋಟೆಲ್‍ಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ 1 ಲಕ್ಷರೂ. ದಂಡ ವಸೂಲಿಗೆ ಆದೇಶಿಸಲಾಗಿದೆ.
ಶನಿವಾರ ಈ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020ರ ಸೆಕ್ಷನ್ 04, 15 ಹಾಗೂ 17ರ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಹಾಗೂ ಮಾಸ್ಕ್ ಧರಿಸುವ ಕುರಿತಂತೆ ನಿಯಮಗಳನ್ನು ರೂಪಿಸಿದ್ದು, ಈ ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ದಂಡ ವಿಧಿಸುವ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಹೋಟೆಲ್‍ಗಳು, ಕಲ್ಯಾಣ ಮಂಟಪಗಳು, ಚಿತ್ರಮಂದಿರ, ಮಾಲ್‍ಗಳು, ಸಭೆ ಸಮಾರಂಭಗಳು, ಅಂಗಡಿ ಮುಂಗಟ್ಟುಗಳ ಮಾಲಕರು ತಮ್ಮ ಆವರಣಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವ ಕುರಿತು ಪರಿಶೀಲನೆ ಮಾಡಬೇಕು. ತಪ್ಪಿದಲ್ಲಿ ಮಾಲಕರಿಗೆ 1 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಈ ವಿಷಯವಾಗಿ ಕಾರ್ಯನಿರತ ಆರೋಗ್ಯ ನಿರೀಕ್ಷಕರು ಹಾಗೂ ವಾರ್ಡ್ ಮಾರ್ಷಲ್‍ಗಳು ನಿಯಮ ಉಲ್ಲಂಘನೆ ಮಾಡಿದ್ದು ಕಂಡುಬಂದಲ್ಲಿ ದಂಡ ವಿಧಿಸಲು ಆಯುಕ್ತರು ಆದೇಶದಲ್ಲಿ ಹೇಳಿದ್ದಾರೆ.
ಯಾರಿಗೆ ಎಷ್ಟು ದಂಡ?
► ಸ್ವ ಸಹಾಯ ಪದ್ಧತಿಯ ಹೋಟೆಲ್‍ಗಳು, ದರ್ಶಿನಿಗಳು, ಆಹಾರ ಮಳಿಗೆಗಳು, ಸಣ್ಣ ಅಂಗಡಿ ಮುಂಗಟ್ಟುಗಳು, ಬೀದಿಬದಿ ತ್ವರಿತ ಆಹಾರ ಮಳಿಗೆಗಳು- 5 ಸಾವಿರ ರೂ.ದಂಡ
► ಹವಾ ನಿಯಂತ್ರಿತವಲ್ಲದ ರೆಸ್ಟೋರೆಂಟ್‍ಗಳು, ಪಾರ್ಟಿ ಹಾಲ್‍ಗಳು, ಅಂಗಡಿ ಮಳಿಗೆಗಳು, ಡಿಪಾರ್ಟ್‍ಮೆಂಟಲ್ ಸ್ಟೋರ್ ಗಳು, ಖಾಸಗಿ ಬಸ್ ನಿಲ್ದಾಣಗಳು, ಇತರೆ ಸಾರ್ವಜನಿಕ ಸ್ಥಳ- 25 ಸಾವಿರ ರೂ.ದಂಡ
► ಹವಾ ನಿಯಂತ್ರಿತ ರೆಸ್ಟೋರೆಂಟ್‍ಗಳು, ಪಾರ್ಟಿ ಹಾಲ್‍ಗಳು, ಅಂಗಡಿ ಮಳಿಗೆಗಳು, ಡಿಪಾರ್ಟ್‍ಮೆಂಟಲ್ ಸ್ಟೋರ್ ಗಳು, ಸಿನಿಮಾ ಹಾಲ್, ಮಲ್ಟಿಫ್ಲೆಕ್ಸ್, ಶಾಪಿಂಗ್ ಮಾಲ್‍ಗಳಿಗೆ 50 ಸಾವಿರ ರೂ.ದಂಡ
► ಸಾರ್ವಜನಿಕ ಸಭೆ, ಸಮಾರಂಭಗಳು, ಕಾರ್ಯಕ್ರಮಗಳು, ರ‍್ಯಾಲಿಗಳು, ಕೂಟಗಳು, ಇತ್ಯಾದಿ ಸಮಾರಂಭಗಳ ಆಚರಣೆ ಮಾಡಿದ ಆಯೋಜಕರಿಗೆ 50 ಸಾವಿರ ರೂ.ದಂಡ
► 3 ಸ್ಟಾರ್ ಮತ್ತು ಅದಕ್ಕೂ ಹೆಚ್ಚಿನ ಸ್ಟಾರ್ ಹೋಟೆಲ್‍ಗಳು, 500 ಹಾಗೂ ಅದಕ್ಕಿಂತ ಹೆಚ್ಚು ಆಸನ ಹೊಂದಿದ ಕಲ್ಯಾಣ ಮಂಟಪಗಳು, ಸಮುದಾಯ ಭವನಗಳಿಗೆ 1 ಲಕ್ಷರೂ. ದಂಡ
► ಮೇಲಿನ ಸ್ಥಳಗಳನ್ನು ಹೊರತುಪಡಿಸಿ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ 10 ಸಾವಿರಕ್ಕಿಂತ ಹೆಚ್ಚು ದಂಡ







