ಕನ್ನಡ ಸಾಹಿತ್ಯ ಲೋಕದಲ್ಲಿ ಜಾತ್ಯತೀತ ಗುಣವಿದೆ: ನಟರಾಜ್ ಹುಳಿಯಾರ್
'ಚಿತ್ರ ಚಿಗುರುವ ಹೊತ್ತು' ಕೃತಿ ಬಿಡುಗಡೆ

ಬೆಂಗಳೂರು, ಡಿ.5: ಕನ್ನಡ ಸಾಹಿತ್ಯ ಲೋಕ ಜಾತ್ಯತೀತವಾಗಿದ್ದು, ಯಾವುದೇ ಪ್ರದೇಶ, ವರ್ಗದಿಂದ ಬರುವ ಲೇಖಕರ, ಕವಿಗಳ ಪ್ರತಿಭೆಗಳನ್ನು ಗುರುತಿಸಿ ಅಪ್ಪಿಕೊಳ್ಳುವಂತಹ ಗುಣವನ್ನು ಹೊಂದಿದೆ ಎಂದು ಹಿರಿಯ ಲೇಖಕ ಡಾ.ನಟರಾಜ್ ಹುಳಿಯಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶನಿವಾರ ಸಂಗಾತ ಸಾಹಿತ್ಯ ಪತ್ರಿಕೆ ನಗರದಲ್ಲಿ ಆಯೋಜಿಸಿದ್ದ ಕವಿ ಚಾಂದ್ ಪಾಷಾ ಅವರ ಚಿ.ಶ್ರೀನಿವಾಸರಾಜು ಕಾವ್ಯ ಪ್ರಶಸ್ತಿ ಪುರಸ್ಕೃತ ‘ಚಿತ್ರ ಚಿಗುರುವ ಹೊತ್ತು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪಾಶ್ಚಿಮಾತ್ಯ ದೇಶಗಳಲ್ಲಿ ಕವಿತೆಯ ಕಾಲ ಮುಗಿಯಿತು ಎನ್ನುವ ಮಾತುಗಳಿವೆ. ಆದರೆ, ಇನ್ನು ಮಾತನ್ನೇ ಶುರುಮಾಡದ ಭಾರತದಲ್ಲಿರುವ ಸಮುದಾಯಗಳಲ್ಲಿ ಕಾವ್ಯಕ್ಕೆ ವಿಫುಲ ಅವಕಾಶವಿದೆ ಎಂದು ತಿಳಿಸಿದ್ದಾರೆ.
ದಲಿತ, ಅಲ್ಪಸಂಖ್ಯಾತ, ಬುಡಕಟ್ಟು ಸಮುದಾಯಗಳಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶ ಸಿಗಬೇಕಾಗಿದೆ. ಸಾಹಿತಿಗಳಾದ ಬಾನು ಮುಷ್ತಾಕ್, ಫಕೀರ್ ಮುಹಮ್ಮದ್ ಕಟ್ಪಾಡಿ, ಬೊಳುವಾರು ಮುಹಮ್ಮದ್ ಕುಂಞಿ ಅವರ ಸಾಹಿತ್ಯ ಮುನ್ನೆಲೆಗೆ ಬಂದ ನಂತರ ನಮ್ಮ ಉದಾರವಾದಿ ಕನ್ನಡ ಸಾಹಿತ್ಯ ಲೋಕ ಬೆರಗುಗಣ್ಣಿನಿಂದ ನೋಡುವಂತಾಯಿತು. ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಬರೆಯಲು ಸಾರಾ ಅಬೂಬಕ್ಕರ್ ಗೆ ಅವಕಾಶ ಕೊಟ್ಟ ನಂತರವೇ ಚಂದ್ರಗಿರಿಯ ತೀರದಲ್ಲಿ ಎಂಬ ಕಾದಂಬರಿ ನಮ್ಮೆಲ್ಲರಿಗೂ ದಕ್ಕುವಂತಾಯಿತು. ಹೀಗಾಗಿ ಶೋಷಿತ ಸಮುದಾಯಗಳಾದ ದಲಿತ ಹಾಗೂ ಅಲ್ಪಸಂಖ್ಯಾತರಿಗೆ ಒಂದು ಅವಕಾಶ ಮಾಡಿಕೊಟ್ಟರೆ, ಅದರ ಪ್ರತಿಫಲ ಸಮಾಜಕ್ಕೆ ದುಪ್ಪಟ್ಟು ಪ್ರಮಾಣದಲ್ಲಿ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶೋಷಿತ ವಲಯದಿಂದ ಬಂದ ಸಾಹಿತ್ಯ ಕೇವಲ ಒಬ್ಬ ವ್ಯಕ್ತಿಯದಾಗಿರುವುದಿಲ್ಲ. ಇಡೀ ಸಮುದಾಯದ ತವಕ, ತಲ್ಲಣಗಳ ಪ್ರತೀಕವಾಗಿರುತ್ತದೆ. ಹೀಗಾಗಿಯೇ ಆಫ್ರಿಕಾದ ಕಪ್ಪು ಜನಾಂಗದ ಕಾವ್ಯ ಬಿಳಿಯರ ಕಣ್ಣು ತೆರೆಸಿದ್ದು, ದಲಿತ ಕಾವ್ಯ ಇಲ್ಲಿನ ಸವರ್ಣೀಯರಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು. ಹಾಗೆಯೇ ಈ ಸಮುದಾಯಗಳಿಂದ ಬರುತ್ತಿರುವ ಸಾಹಿತ್ಯ ಇತರೆ ಸಮುದಾಯಗಳಿಗೆ ಕಣ್ಣು ತೆರೆಸುತ್ತಿವೆ ಎಂದು ಅವರು ತಿಳಿಸಿದರು.
ಕವಿಯಾದವನಿಗೆ ಇಲ್ಲಿಯವರೆಗಿನ ಪ್ರತಿಮೆಗಳನ್ನು ಒಡೆದು ಹೊಸತೊಂದನ್ನು ಕಟ್ಟುವುದು ಸವಾಲಾಗಿರುತ್ತದೆ. ಬೋದಿಲೇರ್ ಸೇರಿದಂತೆ ಹಲವರು ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಕನ್ನಡ ಕಾವ್ಯ ಲೋಕಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಕವಿ ಚಾಂದ್ ಪಾಷಾ ತನ್ನದೇ ನುಡಿಗಟ್ಟು ಸೃಷ್ಟಿಸಿಕೊಳ್ಳಲಿ ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾಭಾರತಿ ಬೆಂಗಳೂರು ಬ್ಯುರೋ ಮುಖ್ಯಸ್ಥ ಬಸವರಾಜು ಮೇಗಲಕೇರಿ, ಕವಿ ಚಾಂದ್ ಪಾಷಾ, ದೀವಟಿಗೆಯ ಕೃಷ್ಣಮೂರ್ತಿ ಸೇರಿದಂತೆ ಹಲವರು ಉಸಸ್ಥಿತರಿದ್ದರು.







