ಅಧಿವೇಶನ ನಡೆಸದಿದ್ದರೆ 'ಸುವರ್ಣ ವಿಧಾನಸೌಧ' ಕಟ್ಟಿದ್ದು ಯಾವ ಪುರುಷಾರ್ಥಕ್ಕೆ: ಡಿ.ಕೆ.ಶಿವಕುಮಾರ್

ಬೆಳಗಾವಿ, ಡಿ. 5: 'ಇಲ್ಲಿನ ಸುವರ್ಣ ವಿಧಾನಸೌಧವನ್ನು ನಾವೇ ನಿರ್ಮಿಸಿದ್ದು ಎಂದು ಹೇಳುವ ಬಿಜೆಪಿ ಮುಖಂಡರು, ಅಲ್ಲಿ ಅಧಿವೇಶನ ನಡೆಸದಿದ್ದರೆ ಕಟ್ಟಡವನ್ನು ಕಟ್ಟಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಹೇಳಬೇಕು' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಕಿಡಿಕಾರಿದ್ದಾರೆ.
ಶನಿವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರಿನ ವಿಧಾನಸೌಧ, ಸಿಎಂ ಗೃಹಕಚೇರಿ ಕೃಷ್ಣಾ ಬಿಟ್ಟು ಹೊರಗೆ ಬಂದಿಲ್ಲ. ಹೀಗಾದರೆ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಹೇಗೆ ಸಾಧ್ಯ ಎಂದು ವಾಗ್ದಾಳಿ ನಡೆಸಿದರು.
ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಸಬೇಕು. ಆದರೆ, ಕಳೆದ ವರ್ಷ ಪ್ರವಾಹದ ನೆಪವೊಡ್ಡಿ ಅಧಿವೇಶನ ನಡೆಸಲಿಲ್ಲ. ಈ ಬಾರಿಯೂ ಕೊರೋನ ಸೋಂಕಿನ ನೆಪದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸುತ್ತಿಲ್ಲ. ಇದು ಈ ಭಾಗದ ಜನರಿಗೆ ಮಾಡುವ ಅನ್ಯಾಯ ಎಂದು ಶಿವಕುಮಾರ್ ಆಕ್ರೋಶ ಹೊರಹಾಕಿದರು.
ರೈತರನ್ನು ಹಾಳು ಮಾಡಲು ಕಾಯ್ದೆ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಒಂದು ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾರಿಗೆ ತರಲಾಗುತ್ತಿದೆ. ಆದರೆ, ಉತ್ತರ ಪ್ರದೇಶದಿಂದಲೇ ಅತಿ ಹೆಚ್ಚು ದನದ ಮಾಂಸವನ್ನು ರಫ್ತು ಮಾಡಲಾಗುತ್ತಿದೆ ಎಂದ ಶಿವಕುಮಾರ್, ಮುದಿ ದನಗಳನ್ನು ಸಾಕಲು ಸರಕಾರ ಹಣ ನೀಡುತ್ತದೆಯೇ? ಎಂದು ಪ್ರಶ್ನಿಸಿದರು.







