ಹೊಸ ವರ್ಷಾಚರಣೆಗೆ ನಿರ್ಬಂಧ: ಸಚಿವ ಆರ್.ಅಶೋಕ್

ಬೆಳಗಾವಿ, ಡಿ. 5: ಕೋವಿಡ್ ಎರಡನೆ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ 2021ರ ನೂತನ ವರ್ಷಾಚರಣೆಗೆ ನಿರ್ಬಂಧ ಹೇರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೋವಿಡ್ -19 ಸೋಂಕು ತಡೆಗಟ್ಟಲು ಸರಕಾರ ಕೆಲ ನಿರ್ಬಂಧಗಳನ್ನು ಹೇರುವುದು ಅನಿವಾರ್ಯ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದರು.
ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುವ ಸಂಬಂಧ ಶೀಘ್ರದಲ್ಲೆ ಅಧಿಸೂಚನೆ, ಮಾರ್ಗಸೂಚಿ ಹೊರಡಿಸಲಾಗುವುದು ಎಂದ ಅಶೋಕ್, ಹೋಟೆಲ್‍ಗಳಲ್ಲಿ ಪಾರ್ಟಿ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ, ಕೊರೋನ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ. ಕೊರೋನ ಸೋಂಕು ತಡೆಗಟ್ಟಲು ಎಲ್ಲರೂ ಸರಕಾರದೊಂದಿಗೆ ಸಹಕಾರ ನೀಡಬೇಕು ಎಂದು ಕೋರಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಸುಭದ್ರವಾಗಿದ್ದು, ಕುಮಾರಸ್ವಾಮಿ ಸೇರಿ ನಮಗೆ ಯಾರ ಬೆಂಬಲದ ಅಗತ್ಯವೂ ಇಲ್ಲ. ಯಾರೊಂದಿಗೂ ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದ ಅಶೋಕ್, ಇದೇ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆ ಕಾನೂನು ಜಾರಿಗೆ ತರಲಾಗುವುದು ಎಂದರು.





