170 ಕೋಟಿ ರೂ. ಮೊತ್ತದ ಮೋಸದ ವ್ಯವಹಾರ: ಇಬ್ಬರ ಬಂಧನ

ಮುಂಬೈ, ಡಿ.5: ಜಿಎಸ್‌ಟಿ ತೆರಿಗೆ ಪಾವತಿಗೆ ಸಂಬಂಧಿಸಿ 170.35 ಕೋಟಿ ರೂ.ಗೂ ಅಧಿಕ ಮೊತ್ತದ ಮೋಸದ ವ್ಯವಹಾರ ಪ್ರಕರಣ ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಎರಡು ವ್ಯಾಪಾರ ಸಂಸ್ಥೆಗಳ ಇಬ್ಬರು ಮಾಲಕರನ್ನು ಬಂಧಿಸಿರುವುದಾಗಿ ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್‌ಟಿ ಇಂಟೆಲಿಜೆನ್ಸ್ (ಡಿಜಿಜಿಐ)ನ ಹೇಳಿಕೆ ತಿಳಿಸಿದೆ.
ಗುಜರಿ/ ಹಳೆ ವಸ್ತುಗಳ ವ್ಯವಹಾರ ನಡೆಸುವ ಎರಡು ಸಂಸ್ಥೆಗಳು ನಕಲಿ ಬಿಲ್‌ಗಳನ್ನು ಸೃಷ್ಟಿಸಿ ‘ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್’ (ಖರೀದಿ ಸಂದರ್ಭ ಪಾವತಿಸುವ ತೆರಿಗೆಯ ಮೊತ್ತವನ್ನು ಉತ್ಪಾದಿತ ವಸ್ತುಗಳಿಗೆ ತೆರಿಗೆ ವಿಧಿಸುವಾಗ ಕಳೆಯುವುದು)ಗಳನ್ನು ಪಡೆದಿರುವ ಮಾಹಿತಿಯಂತೆ ಡಿಸೆಂಬರ್ 3 ಮತ್ತು 4ರಂದು ಹಲವೆಡೆ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಈ ಸಂದರ್ಭ ಸಂಸ್ಥೆಗಳು ಗುಪ್ತವಾಗಿ ಅಡಗಿಸಿಟ್ಟ ಹಲವು ಡೈರಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರತೀ ಅಕ್ರಮ ವ್ಯವಹಾರದಲ್ಲಿ ಲಭಿಸುವ ಕಮಿಷನ್ ಮೊತ್ತವನ್ನು ಸಂಕೇತಾಕ್ಷರಗಳಲ್ಲಿ ಡೈರಿಯಲ್ಲಿ ನಮೂದಿಸಲಾಗಿದೆ ಎಂದು ಡಿಜಿಜಿಐ ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರ ಎರಡೂ ಸಂಸ್ಥೆಗಳ ಮಾಲಕರನ್ನು ಬಂಧಿಸಲಾಗಿದ್ದು ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣ ದಾಖಲಿಸಿದ್ದು ಡಿಸೆಂಬರ್ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







