ಇಂದು ಭಾರತ- ಆಸ್ಟ್ರೇಲಿಯ ಎರಡನೇ ಟ್ವೆಂಟಿ-20 ಪಂದ್ಯ: ಕೊಹ್ಲಿ ಪಡೆಗೆ ಸರಣಿ ಗೆಲ್ಲುವ ಚಿತ್ತ

ಸಿಡ್ನಿ, ಡಿ.5: ಏಕದಿನ ಸರಣಿಯನ್ನು ಕಳೆದುಕೊಂಡಿರುವ ಟೀಮ್ ಇಂಡಿಯಾ ರವಿವಾರ ಇಲ್ಲಿ ನಡೆಯಲಿರುವ ಆಸ್ಟ್ರೇಲಿಯ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದೆ.
ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ 11 ರನ್‌ಗಳ ರೋಚಕ ಜಯ ದಾಖಲಿಸಿತ್ತು. ಎರಡನೇ ಪಂದ್ಯಕ್ಕೆ ಆಲ್‌ರೌಂಡರ್ ರವೀಂದ್ರ ಜಡೇಜ ಇಲ್ಲ. ಅವರ ಅನುಪಸ್ಥಿತಿಯಲ್ಲಿ ಈ ಪಂದ್ಯವನ್ನು ಭಾರತ ಆಡಬೇಕಾಗಿದೆ.
ಪ್ರವಾಸಿ ಭಾರತ ಟೆಸ್ಟ್ ಪಂದ್ಯವನ್ನು ಆಡುವ ಮೊದಲು ಟ್ವೆಂಟಿ-20 ಸರಣಿ ಗೆದ್ದರೆ ಹೆಚ್ಚು ಅನುಕೂಲವಾಗಬಹುದು ಎಂಬ ಲೆಕ್ಕಾಚಾರದಲ್ಲಿದೆ. ಕ್ಯಾನ್‌ಬೆರಾದಲ್ಲಿ ಎರಡು ಸೀಮಿತ ಓವರ್‌ಗಳ ಪಂದ್ಯಗಳನ್ನು ಗೆದ್ದಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ತಂಡ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ (ಎಸ್‌ಸಿಜಿ) ನಡೆಯಲಿರುವ ಮುಂದಿನ ಎರಡು ಪಂದ್ಯಗಳು ತಮಗೆ ಉತ್ತಮವಾಗಲಿ ಎಂದು ಆಶಿಸುತ್ತಿದೆೆ.
ಮೊದಲ ಪಂದ್ಯದಲ್ಲಿ ಆಟಗಾರ ಯಜುವೇಂದ್ರ ಚಹಾಲ್ ಅವರ ಭರ್ಜರಿ ಬೌಲಿಂಗ್ ಪ್ರದರ್ಶನದ ಹಿನ್ನಲೆಯಲ್ಲಿ ಭಾರತ ಗೆಲುವಿನ ದಡ ಸೇರಿತ್ತು. ಈ ಕಾರಣದಿಂದಾಗಿ ಭಾರತವು ಹೆಚ್ಚು ಆತ್ಮವಿಶ್ವಾಸದಿಂದ ಎರಡನೇ ಪಂದ್ಯವನ್ನು ಆಡಲಿದೆ. ರವೀಂದ್ರ ಜಡೇಜ ಆಸ್ಟ್ರೇಲಿಯ ವಿರುದ್ಧ ಉಳಿದ ಎರಡು ಟ್ವೆಂಟಿ-20 ಪಂದ್ಯಗಳಲ್ಲಿ ಹೊರಗುಳಿಯಲಿದ್ದಾರೆ . ಅವರ ಬದಲಿಗೆ ಶಾರ್ದುಲ್ ಠಾಕೂರ್ ತಂಡಕ್ಕೆ ಸೇರಿಕೊಳ್ಳಲಿದ್ದಾರೆ
ಜಡೇಜ 23 ಎಸೆತಗಳಲ್ಲಿ ಗಳಿಸಿದ ಅಜೇಯ 44 ರನ್ ನೆರವಿನಲ್ಲಿ ಭಾರತ ಕಳೆದ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 161 ರನ್ ಗಳಿಸಿತ್ತು. ಆದಾಗ್ಯೂ ನಾಯಕ ಕೊಹ್ಲಿ ಕೆಳಕ್ರಮಾಂಕದ ಆಟಗಾರರ ಕೊಡುಗೆ ಅಷ್ಟೇನು ಅಗತ್ಯವಿಲ್ಲ ಎಂದು ನಿರೀಕ್ಷಿಸುತ್ತಿದ್ದಾರೆ. ಅಗ್ರ ಐದು ಬ್ಯಾಟ್ಸ್‌ಮನ್‌ಗಳು ಉತ್ತಮ ಮೊತ್ತವನ್ನು ಕಲೆ ಹಾಕುವಷ್ಟು ಅಥವಾ ಗೆಲುವಿನ ಗುರಿಯನ್ನು ಬೆನ್ನಟ್ಟಲು ಶಕ್ತರಾಗಿದ್ದಾರೆ ಎಂಬ ಲೆಕ್ಕಚಾರದಲ್ಲಿದ್ದಾರೆ.
ಅದ್ಭುತ ಫಾರ್ಮ್‌ನಲ್ಲಿದ್ದ ಎದುರಾಳಿ ತಂಡದ ನಾಯಕ ಆ್ಯರನ್ ಫಿಂಚ್ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಇದು ಭಾರತಕ್ಕೆ ಹೆಚ್ಚು ಅನುಕೂಲವಾಗಬಹುದು. ಗಾಯದಿಂದಾಗಿ ಡೇವಿಡ್ ವಾರ್ನರ್ ಹೊರಗುಳಿದಿರುವುದರಿಂದ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯ ಹೊಂದಿದ್ದ ರನ್ ವೇಗ ಕಡಿಮೆಯಾದಂತಿದೆ.
ಸ್ಟೀವ್ ಸ್ಮಿತ್ ಅತ್ಯುತ್ತಮ ಟ್ವೆಂಟಿ-20 ಆಟಗಾರನಲ್ಲ. ಕಳೆದ ಪಂದ್ಯದಲ್ಲಿ 12 ರನ್ ಗಳಿಸಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಮಿತಿಗಳನ್ನು ಹೊಂದಿದ್ದಾರೆ.
ನಾಯಕ ಕೊಹ್ಲಿ ಅವರು ಚೆನ್ನಾಗಿ ಆಡಿದರೆ ಭಾರತದ ಅರ್ಧದಷ್ಟು ಒತ್ತಡ ಕಡಿಮೆಯಾಗಬಹುದು.
ಮನೀಶ್ ಪಾಂಡೆ ಎರಡನೇ ಪಂದ್ಯದಲ್ಲಿ ಅವಕಾಶ ಪಡೆಯುತ್ತಾರೋ ಎನ್ನುವುದು ಕುತೂಹಲ ಕೆರಳಿಸಿದೆ. ಪಾಂಡೆ ಮತ್ತು ಶ್ರೇಯಸ್ ಅಯ್ಯರ್ ಅವರು ಒಂದೇ ರೀತಿಯ ಆಟಗಾರರಾಗಿರುವುದರಿಂದ ಹೆಚ್ಚಿನ ವ್ಯತ್ಯಾಸವಿಲ್ಲ.ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್‌ನಲ್ಲಿರುವುದು ಭಾರತದ ಬ್ಯಾಟಿಂಗ್‌ನ್ನು ಇನ್ನಷ್ಟು ಬಲಿಷ್ಠಗೊಳಿಸಿದೆ. ಆಸ್ಟ್ರೇಲಿಯ ತಂಡದ ಒಂದು ಕುತೂಹಲಕಾರಿ ಅಂಶವೆಂದರೆ ಅನುಭವಿ ಟೆಸ್ಟ್ ತಜ್ಞ ನಾಥನ್ ಲಿಯಾನ್ ಅವರನ್ನು ಟ್ವೆಂಟಿ-20 ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮೊದಲ ಆರು ಓವರ್‌ಗಳಲ್ಲಿ ಭಾರತ ಯುವ ಆಫ್ ಸ್ಪಿನ್ನರ್ ವಾಶಿಂಗ್ಟನ್ ಸುಂದರ್ ಅವರನ್ನು ಯಶಸ್ವಿಯಾಗಿ ಬಳಸಿದಂತೆಯೇ ಲಿಯಾನ್ ಅವರನ್ನು ಪವರ್‌ಪ್ಲೇನಲ್ಲಿ ಆಸ್ಟ್ರೇಲಿಯ ಬಳಸಬಹುದು.







