ಶಿವಮೊಗ್ಗ: ಆಸ್ಪತ್ರೆಗೆ ಬಂದಿದ್ದ ಬಾಲಕಿಯ ಸಾಮೂಹಿಕ ಅತ್ಯಾಚಾರ
ಮೆಗ್ಗಾನ್ ಆಸ್ಪತ್ರೆ ವಾರ್ಡ್ ಬಾಯ್ ಸಹಿತ ನಾಲ್ವರ ಕೃತ್ಯ: ದೂರು ದಾಖಲು

ಶಿವಮೊಗ್ಗ, ಡಿ.6: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಾಯಿಯ ಜೊತೆ ಆಸ್ಪತ್ರೆಗೆ ಬಂದಿದ್ದ ಬಾಲಕಿಯನ್ನು ಕರದೊಯ್ದು ಮೆಗ್ಗಾನ್ ಆಸ್ಪತ್ರೆ ವಾರ್ಡ್ ಬಾಯ್ ಮತ್ತು ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿರುವ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಗ್ಗಾನ್ ಆಸ್ಪತ್ರೆಯ ವಾರ್ಡ್ ಬಾಯ್ ಮನೋಜ್ ಹಾಗೂ ಆತನ ಮೂವರು ಸ್ನೇಹಿತರು ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಅನಾರೋಗ್ಯದ ಕಾರಣ ಬಾಲಕಿಯ ತಾಯಿ ಇತ್ತೀಚೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೈಕೆ ಮಾಡಲು ಬಾಲಕಿ ಮಗಳು ಕೆಲ ದಿನಗಳಿಂದ ಆಸ್ಪತ್ರೆಯಲ್ಲಿದ್ದಳೆನ್ನಲಾಗಿದೆ. ಈ ವೇಳೆ ವಾರ್ಡ್ ಬಾಯ್ ಮನೋಜ್ ನ ಪರಿಚಯವಾಗಿತ್ತೆನ್ನಲಾಗಿದೆ. ಅಗತ್ಯಬಿದ್ದಾಗ ಮನೋಜ್ ಊಟ, ತಿಂಡಿ ತಂದು ಕೊಟ್ಟು ಸಹಕರಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಿಷೇಧಾಜ್ಞೆ ಸಂದರ್ಭದಲ್ಲಿ ದುಷ್ಕೃತ್ಯ
ಕೆಲ ದಿನಗಳ ಹಿಂದೆ ಗಲಭೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಹೊಟೇಲ್ ಗಳೆಲ್ಲ ಬಂದ್ ಆಗಿದ್ದ ಈ ಸಂದರ್ಭ ಬಾಲಕಿಗೆ ಎಲ್ಲಿಯೂ ಊಟ ಸಿಕ್ಕಿರಲಿಲ್ಲ. ಈ ವೇಳೆ ವಾರ್ಡ್ ಬಾಯ್ ಮನೋಜ್ ಊಟ ಕೊಡಿಸುವುದಾಗಿ ನಂಬಿಸಿ ಕಾರಿನಲ್ಲಿ ಕರೆದೊಯ್ದಿದ್ದಾನೆ. ಈ ವೇಳೆ ಕಾರಿನಲ್ಲಿ ಮನೋಜ್ ಜೊತೆಗೆ ಆತನ ಮೂವರು ಸ್ನೇಹಿತರು ಇದ್ದು, ಬಾಲಕಿಯನ್ನು ಸಾಗರ ರಸ್ತೆಯಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಅತ್ಯಾಚಾರದ ವಿಚಾರವನ್ನು ಬಾಲಕಿ ತಾಯಿಗೆ ತಿಳಿಸಿದ್ದು, ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿಗಳಿಗೆ ಬಲೆ ಬೀಸಿದ ಪೊಲೀಸ್
ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸಮೂಹಿಕ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ನಡುವೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.







