ಗೋಹತ್ಯೆ ನಿಷೇಧ, 'ಲವ್ ಜಿಹಾದ್' ಮಸೂದೆ ಮಂಡನೆಗೆ ಅವಕಾಶ ನೀಡುವುದಿಲ್ಲ: ಕಾಂಗ್ರೆಸ್

ಬೆಂಗಳೂರು, ಡಿ.6: ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಆಡಳಿತಾರೂಢ ಬಿಜೆಪಿಯು ವಿಧಾನ ಮಂಡಲ ಅಧಿವೇಶನದಲ್ಲಿ 'ಗೋಹತ್ಯೆ ನಿಷೇಧ, ಲವ್ ಜಿಹಾದ್' ಮಸೂದೆ ಮಂಡಿಸಲು ಮುಂದಾದರೆ ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ವಿಪಕ್ಷ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
ರವಿವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖಂಡರಾದ ಕೆ.ಆರ್. ರಮೇಶ್ ಕುಮಾರ್, ಎಚ್.ಕೆ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್ ಸೇರಿದಂತೆ ಹಿರಿಯ ಮುಖಂಡರ ಉಪಸ್ಥಿತಿಯಲ್ಲಿ ವಿಧಾನ ಮಂಡಲದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಯಿತು.
ಭೂ ಸುಧಾರಣೆ, ಎಪಿಎಂಸಿಯಂತಹ ವಿವಾದಿತ ತಿದ್ದುಪಡಿ ಕಾಯ್ದೆಗಳ ಅಂಗೀಕಾರಕ್ಕೆ ವಿಧಾನ ಮಂಡಲದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಲು ಕಾಂಗ್ರೆಸ್ ನಿರ್ಧರಿಸಿದೆ. ರಾಜ್ಯ ಬಿಜೆಪಿ ಸರಕಾರ ಅಭಿವೃದ್ಧಿಗೆ ಪೂರಕವಾದ ಯಾವುದೇ ಕಾನೂನುಗಳನ್ನು ಜಾರಿಗೆ ತರುತ್ತಿಲ್ಲ. ಬದಲಿಗೆ ತನ್ನ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಕಾನೂನು ರೂಪಿಸುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಕೊರೋನ, ತೀವ್ರ ಸ್ವರೂಪದ ಪ್ರವಾಹ ಪರಿಸ್ಥಿತಿಯಿಂದ ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿದೆ. ಆದರೆ, ಸರಕಾರ ಈ ಬಗ್ಗೆ ಯಾವುದೇ ರೀತಿಯಲ್ಲಿ ಜನರ ನೆರವಿಗೆ ಧಾವಿಸಿಲ್ಲ. ಕೃಷಿಯನ್ನೆ ಅವಲಂಬಿಸಿರುವ ಗ್ರಾಮೀಣ ಪ್ರದೇಶದ ಜನರಿಗೆ ಕಠಿಣವಾಗುವ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸರಕಾರ ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಲಾಗಿದೆ.
ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ರೀತಿಯಲ್ಲಿ ಕಾರ್ಯತಂತ್ರ ಅನುಸರಿಸಬೇಕು, ವಿವಾದಿತ ಮಸೂದೆಗಳ ಮಂಡನೆಗೆ ಅವಕಾಶ ಸಿಗದಂತೆ ಎಚ್ಚರಿಕೆ ವಹಿಸಬೇಕು, ಒಂದು ವೇಳೆ ಮಂಡನೆಯಾದರೂ ಅವು ಅಂಗೀಕಾರಗೊಳ್ಳದಂತೆ ಕಾಲ-ಕಾಲಕ್ಕೆ ತಕ್ಕಂತೆ ರಣತಂತ್ರಗಳನ್ನು ಪಾಲಿಸಬೇಕೆಂದು ಕಾಂಗ್ರೆಸ್ ನಿರ್ಣಯಿಸಿದೆ.
ಬಿಜೆಪಿ ಶಾಸಕ ಸಿದ್ದು ಸವದಿ ತೇರದಾಳ ನಗರಸಭೆ ಮಹಿಳಾ ಸದಸ್ಯರ ಮೇಲೆ ನಡೆದ ದೌರ್ಜನ್ಯ, ಪ್ರವಾಹ, ಕೆ.ಜಿ.ಹಳ್ಳಿ, ಡಿ.ಜಿ.ಹಳ್ಳಿ ಗಲಭೆ ಪ್ರಕರಣ, ಆಡಳಿತದಲ್ಲಿ ಸಿಎಂ ಪುತ್ರನ ಹಸ್ತಕ್ಷೇಪ, ವರ್ಗಾವಣೆ ದಂಧೆ, ಸಂಪುಟ ವಿಸ್ತರಣೆ ಗೊಂದಲ, ಆಡಳಿತದ ನಿಷ್ಕ್ರಿಯತೆ, ಅಭಿವೃದ್ಧಿ ಕಾರ್ಯಗಳ ಕುಂಠಿತ ಸೇರಿದಂತೆ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಚರ್ಚೆಗೆ ಆಗ್ರಹಿಸಲು ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
.jpg)







