ರೈತರ ಬೇಡಿಕೆ ಈಡೇರದಿದ್ದರೆ 'ಖೇಲ್ ರತ್ನ'ವಾಪಸ್: ವಿಜೇಂದರ್ ಸಿಂಗ್

ಹೊಸದಿಲ್ಲಿ: ದಿಲ್ಲಿ ಗಡಿ ಪ್ರದೇಶದಲ್ಲಿ ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಬೇಡಿಕೆಗಳು ಈಡೇರದಿದ್ದರೆ ತನಗೆ ಲಭಿಸಿರುವ ರಾಜೀವ್ ಗಾಂಧಿ 'ಖೇಲ್ ರತ್ನ' ಪ್ರಶಸ್ತಿಯನ್ನು ವಾಪಸ್ ನೀಡುತ್ತೇನೆ ಎಂದು 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕವಿಜೇತ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ರವಿವಾರ ಹೇಳಿದ್ದಾರೆ.
ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ 35ರ ಹರೆಯದ ಬಾಕ್ಸರ್ ವಿಜೇಂದರ್, ಮೂರು ವಿಧೇಯಕಗಳನ್ನು ರದ್ದುಪಡಿಸದಿದ್ದರೆ ತಾನು ದೇಶದ ಅತ್ಯುನ್ನತ ಕ್ರೀಡಾ ಗೌರವವನ್ನು ವಾಪಸ್ ನೀಡುವೆ ಎಂದರು.
ನಾನು ಪಂಜಾಬ್ ನೊಂದಿಗೆ ಸಾಕಷ್ಟು ನಂಟು ಹೊಂದಿದ್ದೇನೆ. ನನ್ನ ಬಾಕ್ಸಿಂಗ್ ವೃತ್ತಿಜೀವನದಲ್ಲಿ ಪಾಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಹೆಚ್ಚಿನ ಸಮಯ ಕಳೆದಿದ್ದೇನೆ. ಇದೀಗ ರಾಜ್ಯದ ಋಣ ತೀರಿಸುವುದು ನನ್ನ ಕರ್ತವ್ಯ. ನಾನು ರೈತರ ಬೇಡಿಕೆಗಳಿಗೆ ಸಂಪೂರ್ಣ ಬೆಂಬಲ ನೀಡುವೆ. ಇಡೀ ದೇಶ ಅವರಿಗೆ ಬೆಂಬಲ ನೀಡಬೇಕು. ರೈತರು ದೇಶದ ಜೀವನಾಡಿ. ಅವರಿಲ್ಲದೇ ಇದ್ದರೆ ನಾವು ಒಂದು ದಿನವೂ ಬದುಕಲು ಸಾಧ್ಯವಿಲ್ಲ ಎಂದು ಸೋನೆಪತ್ ನ ಸಿಂಘು ಗಡಿಯಲ್ಲಿ ವಿಜೇಂದರ್ ಹೇಳಿದರು.





