ಕಾಂಗ್ರೆಸ್ ಗೆ ಕೈಕೊಟ್ಟ ನಟಿ ವಿಜಯಶಾಂತಿ
ಸೋಮವಾರ ಬಿಜೆಪಿಗೆ ಸೇರ್ಪಡೆ ಸಾಧ್ಯತೆ

ಹೈದರಾಬಾದ್: ನಟಿ-ರಾಜಕಾರಣಿ ವಿಜಯಶಾಂತಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಸೋಮವಾರ ಬಿಜೆಪಿಯನ್ನು ಸೇರುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು India Today TVಗೆ ತಿಳಿಸಿವೆ.
ಸೋಮವಾರ ಬಿಜೆಪಿಗೆ ಸೇರಿದ ಬಳಿಕ ವಿಜಯಶಾಂತಿ ಅವರು ಹೊಸದಿಲ್ಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ತೆಲಂಗಾಣದ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ ಕುಮಾರ್ ಹೈದರಾಬಾದ್ ನಿಂದ ದಿಲ್ಲಿಗೆ ತೆರಳಿದ್ದಾರೆ.
ವಿಜಯಶಾಂತಿ ಅವರು 2014ರಲ್ಲಿ ಕಾಂಗ್ರೆಸ್ ಪಕ್ಷವನ್ನುಸೇರಿದ್ದರು. ವಿಜಯ ಶಾಂತಿ ಅವರು 1997ರಲ್ಲಿ ಬಿಜೆಪಿ ಪಕ್ಷದಲ್ಲಿದ್ದರು. ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಯುತ್ತಿದ್ದ ವೇಳೆ ಅವರು ಟಿಆರ್ ಎಸ್ ಮುಖ್ಯಸ್ಥ ಕೆಸಿ ಚಂದ್ರಶೇಖರ್ ರಾವ್ ಅವರೊಂದಿಗೆ ಗುರುತಿಸಿಕೊಂಡಿದ್ದರು.
ಟಿಆರ್ ಎಸ್ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದ ವಿಜಯಶಾಂತಿ ಮೇದಕ್ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾಗಿದ್ದರು. 2009ರಿಂದ 2014ರ ತನಕ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಟಿ ಆರ್ ಎಸ್ ನ್ನು ತ್ಯಜಿಸಿದ್ದ ವಿಜಯಶಾಂತಿ 2014ರಲ್ಲಿ ಕಾಂಗ್ರೆಸ್ ಗೆ ಸೇರಿದ್ದರು.
ಅಕ್ಟೋಬರ್ ನಲ್ಲಿ ಇನ್ನೋರ್ವ ನಟಿ- ರಾಜಕಾರಿಣಿ ಖುಷ್ಬು ಸುಂದರ್ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಸೇರಿದ್ದಾರೆ.





