ಸಮಾಜದ ಸ್ವಾಸ್ಥಕ್ಕೆ ಗೃಹರಕ್ಷಕ ದಳದ ಕೊಡುಗೆ ಮಹತ್ತರ: ಡಿಸಿ ರಾಜೇಂದ್ರ
ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ
ಮಂಗಳೂರು, ಡಿ.6: ಸಮಾಜದ ಶಿಸ್ತು, ಸ್ವಾಸ್ಥಕ್ಕೆ ಗೃಹರಕ್ಷಕ ದಳದ ಕೊಡುಗೆ ಮಹತ್ತರವಾದುದು. ಕೋವಿಡ್ ಸಂದರ್ಭದಲ್ಲೂ ಗೃಹರಕ್ಷಕದಳ ಉತ್ತಮ ಸೇವೆ ಸಲ್ಲಿಸುವ ಮೂಲಕ ಮಹತ್ತರ ಕೊಡುಗೆಯನ್ನು ನೀಡಿರುವುದು ಸ್ಮರಣೀಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.
ದ.ಕ. ಜಿಲ್ಲಾ ಗೃಹರಕ್ಷಕದಳ ದಕ್ಷಿಣ ಕನ್ನಡ ಇದರ ವತಿಯಿಂದ 58ನೇ ವರ್ಷದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಕೃತಿಕ ವಿಕೋಪ, ಅವಘಡ ಸಂದರ್ಭ ಗೃಹರಕ್ಷಕ ದಳಗಳು ಉತ್ತಮ ಸೇವೆಯನ್ನು ನೀಡಿರುವುದು ಶ್ಲಾಘನೀಯ. ಜಿಲ್ಲೆಯ ಕಾನೂನು ಸುವ್ಯ ವಸ್ಥೆ, ಸಂಚಾರ, ಜನಸಂದಣಿ ಪ್ರದೇಶದಲ್ಲಿ ಗೃಹರಕ್ಷಕರು ಸೇವೆ ನೀಡುತ್ತಿದ್ದಾರೆ. ಗೌರಧನಕ್ಕೆ ಸಂಬಂಧಪಟ್ಟಂತಹ ಬೇಡಿಕೆ ಸರಕಾರದ ಮುಂದಿದೆ. ಗೃಹರಕ್ಷಕರು ಸೇವಾ ಮನೋಭಾವದಿಂದ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಸಮಾಜ ಶಿಸ್ತಿಗೆ ಕಾರಣವಾಗಿವೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷದಲ್ಲಿ ಒಂದೊಂದು ರೀತಿ ಪರಿಸ್ಥಿತಿ ಇದ್ದು, ಇಲ್ಲಿ ಕೆಲಸ ಮಾಡುವುದೇ ಸವಾಲು ಎಂದರು.
ಗೃಹರಕ್ಷಕದಳ ಮಾಜಿ ಜಿಲ್ಲಾ ಸಮಾದೇಷ್ಟ ಡಾ.ಬಿ.ಕೆ. ಶಿವಪ್ರಸಾದ್ ರೈ ಮಾತನಾಡಿ, ಎನ್‌ಡಿಆರ್‌ಎ್, ಸಿವಿಲ್ ಡಿೆನ್ಸ್ ಇರದ ಕಾಲದಲ್ಲಿ ಗೃಹರಕ್ಷಕದಳ ಗಣನೀಯ ಕಾರ್ಯ ಮಾಡಿದೆ. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ, ಅವಘಡ ಸಂದರ್ಭದಲ್ಲಿ ಕಾರ್ಯಾಚರಿಸಿದ್ದಲ್ಲದೆ ಅದೆಷ್ಟೋ ಕೋಮು ಸಂಘರ್ಷವನ್ನು ಮುಂಜಾಗ್ರತೆಯಿಂದ ಬೇಧಿಸಿದ, ಗುಪ್ತಮಾಹಿತಿಗಳನ್ನು ಕಲೆ ಹಾಕಿದ ಹೆಗ್ಗಳಿಕೆ ಜಿಲ್ಲಾ ಗೃಹರಕ್ಷಕದಳಕ್ಕಿದೆ ಎಂದರು.
ಗೃಹರಕ್ಷಕದಳ ಜಿಲ್ಲಾ ಸಮಾದೇಷ್ಟ ಡಾ. ಮುರಲೀ ಮೋಹನ ಚೂಂತಾರು ಮಾತನಾಡಿ, ಗೃಹರಕ್ಷಕದಳ ಪ್ರಧಾನಿ, ರಾಷ್ಟ್ರಪತಿಗಳಿಂದ ಕೋವಿಡ್ ವಾರಿಯರ್ಸ್ ಹೆಗ್ಗಳಿಕೆಗೆ ಪಾತ್ರವಾಗಿದೆ. ಗೃಹರಕ್ಷಕದಳ ಸೇವೆ ಸಮಾಜ ಮತ್ತು ವ್ಯವಸ್ಥೆಯ ಮಧ್ಯೆ ಕೊಂಡಿಯಾಗಿದ್ದು, ಅದರ ಮಹತ್ವವನ್ನು ತಿಳಿದು ಪ್ರತಿಯೊಬ್ಬರು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗೃಹರಕ್ಷಕ ಸುರತ್ಕಲ್ ಘಟಕಾಧಿಕಾರಿ ರಮೇಶ್, ಬೆಳ್ತಂಗಡಿ ಘಟಕಾಧಿಕಾರಿ ಜಯಾನಂದ, ಮೂಡುಬಿದಿರೆ ಘಟಕಾಧಿಕಾರಿ ಪಾಂಡಿರಾಜ್, ಪಣಂಬೂರು ಘಟಕಾಧಿಕಾರಿ ಶಿವಪ್ಪ ನಾಯ್ಕ, ವಿಟ್ಲ ಘಟಕಾಧಿಕಾರಿ ಸಂಜೀವ ಅವರ ಉತ್ತಮ ಸೇವೆಗೆ ಸನ್ಮಾನಿಸಲಾಯಿತು.
ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿದರು. ಬೆಳ್ಳಾರೆ ಘಟಕಾಧಿಕಾರಿ ವಸಂತ ಕುಮಾರ್ ಪ್ರತಿಜ್ಞೆ ಬೋಧಿಸಿದರು.
ಕಾರ್ಯಕ್ರಮದಲ್ಲಿ ನಿಧಿ ಪ್ರಾರ್ಥಿಸಿದರು. ಮುರಳಿಧರ ಕಾರ್ಯಕ್ರಮ ನಿರೂಪಿಸಿದರು. ಜಯಾನಂದ ವಂದಿಸಿದರು.







