ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾಯ್ದೆ ಕಠಿಣವಾಗಿರಲಿದೆ: ಸಚಿವ ಪ್ರಭು ಚೌಹಾಣ್

ಬೆಂಗಳೂರು, ಡಿ. 6: ಗೋಹತ್ಯೆ ನಿಷೇಧ ಕಾಯ್ದೆಯನ್ನು ಅನುಷ್ಠಾನಗೊಳಿಸಿರುವ ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಿ ಕಾಯ್ದೆಯ ಅಧ್ಯಯನ ನಡೆಸಿದ್ದು, ಅಲ್ಲಿನ ಕಾಯ್ದೆಯ ರೂಪುರೇಷೆ, ಕಾಯ್ದೆ ಅನುಷ್ಠಾನದಲ್ಲಿ ಅಲ್ಲಿನ ಸರಕಾರಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅಧಿಕಾರಿಗಳೊಂದಿಗೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಉಭಯ ರಾಜ್ಯಗಳಲ್ಲಿ ಕಾಯ್ದೆ ಬಿಗಿಗೊಳಿಸಿರುವ ಅಂಶಗಳನ್ನು ನಮ್ಮ ಮಸೂದೆಯಲ್ಲಿಯೂ ಅಳವಡಿಸಿಕೊಳ್ಳಲಾಗುವುದು. ಗೋಹತ್ಯೆ ನಿಷೇಧ ಕಾಯ್ದೆ ಬಂದ ನಂತರ ಉಭಯ ರಾಜ್ಯಗಳು ಕೈಗೊಂಡಿರುವ ಯೋಜನೆಗಳ ಬಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗಿದೆ. ನಾಳೆಯಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಸರಕಾರ ಗೋಹತ್ಯೆ ನಿಷೇಧ ಕಠಿಣ ಮಸೂದೆಯನ್ನು ಮಂಡಿಸಲಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಸರಕಾರ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬದ್ಧವಾಗಿದೆ. 2010ರ ಮಸೂದೆಯನ್ನು ಇನ್ನಷ್ಟು ಬಿಗಿಗೊಳಿಸಿ ನಾಳೆಯಿಂದ ಆರಂಭವಾಗುವ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 2010ರ ಮಸೂದೆಯನ್ನು ಮತ್ತಷ್ಟು ಬಿಗಿಗೊಳಿಸಲು ಗುಜರಾತ್ ಮತ್ತು ಉತ್ತರ ಪ್ರದೇಶದ ಕೆಲ ಅಂಶಗಳನ್ನು ಪರಿಗಣಿಸಲಾಗುವುದು ಎಂದು ಪ್ರಭು ಚೌಹಾಣ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಬದ್ಧವಾಗಿದ್ದೇವೆ. 2010ರಲ್ಲಿ ಅಂದಿನ ಮುಖ್ಯಮಂತ್ರಿಗಳು ಉಭಯ ಸದನಗಳಲ್ಲಿ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆದ ನಂತರ ಮಸೂದೆಯನ್ನು ರಾಷ್ಟ್ರಪತಿಗಳ ಅನುಮೋದನೆಯನ್ನು ಕಳುಹಿಸಲಾಗಿತ್ತು. ಆದರೆ, ಕೆಲವೊಂದು ತಿದ್ದುಪಡಿಗಳನ್ನು ಸೂಚಿಸಿ ಮಸೂದೆ ವಾಪಸ್ಸಾಯಿತಾದರೂ ಕಾಂಗ್ರೆಸ್ ಸರಕಾರವು ಮಸೂದೆಯನ್ನು ಹಿಂಪಡೆದು ಹಳೆಯ ಕಾಯ್ದೆಯನ್ನೇ ಮುಂದುವರಿಸಿತ್ತು. ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗಿರುವ ಪೂಜ್ಯನೀಯ ಭಾವನೆಯನ್ನು ನಮ್ಮ ಸರಕಾರವು ಗೌರವಿಸಲಿದೆ ಮತ್ತು ಸಂವಿಧಾನದ ಆಶಯದಂತೆ ಗೋ ಸಂರಕ್ಷಣೆ ಮಾಡಲು ಸರಕಾರವು ಬದ್ಧವಾಗಿದೆ ಎಂದು ಪ್ರಭು ಚೌಹಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







