ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗಳ ರಕ್ಷಣೆಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಡಿ. 6: ಅಳಿವಿನ ಅಂಚಿನಲ್ಲಿರುವ ದೈತ್ಯ ಪಕ್ಷಿ ಗ್ರೇಟ್ ಇಂಡಿಯನ್ ಬಸ್ಟರ್ಡ್ (ಹೆಬ್ಬಕ) ಅನ್ನು ತಕ್ಷಣ ರಕ್ಷಿಸುವ ಕೆಲಸ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತು ಬಳ್ಳಾರಿಯ ಎಡ್ವರ್ಡ್ ಮಾರ್ಟಿನ್ ಮತ್ತು ಇನ್ನಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಕ್ರಮಗಳನ್ನು ಕೈಗೊಂಡ ಕುರಿತು ಪ್ರಮಾಣ ಪತ್ರ ಸಲ್ಲಿಸಲು ಸರಕಾರಕ್ಕೆ ನಿರ್ದೇಶನ ನೀಡಿತು.
ಸಂವಿಧಾನದ 48ನೆ ವಿಧಿ ಪ್ರಕಾರ ದೇಶದ ಅರಣ್ಯ, ವನ್ಯಜೀವಿಗಳು ಮತ್ತು ಪ್ರಾಣಿಗಳನ್ನು ರಕ್ಷಿಸುವುದು ರಾಜ್ಯ ಸರಕಾರದ ನೀತಿಯೂ ಆಗಿದೆ. ಅಲ್ಲದೆ, 51ನೆ ವಿಧಿ ಪ್ರಕಾರ ವನ್ಯಜೀವಿಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ, ರಾಜ್ಯದಲ್ಲಿ ಸದ್ಯ ವಾಸಿಸುತ್ತಿರುವ 8 ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯನ್ನು ಸಂರಕ್ಷಿಸಬೇಕೆಂದು ನ್ಯಾಯಪೀಠ ನಿರ್ದೇಶನ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗಳು ಸದ್ಯ ರಾಜಸ್ಥಾನ, ಆಂಧ್ರಪ್ರದೇಶ, ಕರ್ನಾಟಕ ಮಹಾರಾಷ್ಟ್ರ, ಗುಜರಾತ್‍ನಲ್ಲಿ ಮಾತ್ರ ಕಂಡು ಬರುತ್ತವೆ. ಶೇ.90ರಷ್ಟು ಈ ಪಕ್ಷಿಗಳು ಭೇಟೆಗಾರರ ಹಾವಳಿಯಿಂದ ಕಣ್ಮರೆಯಾಗಿದ್ದು, ಕರ್ನಾಟಕದಲ್ಲಿರುವ 8 ಪಕ್ಷಿಗಳನ್ನು ರಕ್ಷಿಸುವ ಅವಶ್ಯಕತೆ ಇದೆ ಎಂದು ಪೀಠಕ್ಕೆ ಮನವಿ ಮಾಡಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಡಿ.21ರೊಳಗೆ ಕ್ರಮಗಳನ್ನು ಕೈಗೊಂಡ ಕುರಿತು ಪ್ರಮಾಣ ಪತ್ರ ಸಲ್ಲಿಸಲು ಸರಕಾರಕ್ಕೆ ನಿರ್ದೇಶನ ನೀಡಿತು.







