ಚರ್ಚ್‌ಗೆ ಭೇಟಿ ನೀಡುವ ಹಿಂದೂಗಳಿಗೆ ಥಳಿಸುವ ಬೆದರಿಕೆ: ಬಜರಂಗದಳದ ನಾಯಕನ ವಿರುದ್ಧ ತನಿಖೆಗೆ ಆದೇಶಿಸಿದ ಜಿಲ್ಲಾಡಳಿತ

ಸಿಲ್ಚಾರ್ (ಅಸ್ಸಾಂ), ಡಿ. 6: ಕ್ರಿಸ್ಮಸ್ ಆಚರಣೆಯ ಸಂದರ್ಭ ಚರ್ಚ್‌ಗಳಿಗೆ ಭೇಟಿ ನೀಡುವ ಹಿಂದೂಗಳಿಗೆ ಥಳಿಸಲಾಗುವುದು ಎಂದು ಬೆದರಿಕೆ ಒಡ್ಡಿದ ಬಜರಂಗ ದಳದ ಸ್ಥಳೀಯ ನಾಯಕನದ್ದೆಂದು ಹೇಳಲಾದ ಉತ್ತೇಜನಕಾರಿ ಹೇಳಿಕೆಯ ಕುರಿತು ತನಿಖೆ ನಡೆಸುವಂತೆ ಅಸ್ಸಾಂನ ಕಚರ್ ಜಿಲ್ಲಾಡಳಿತ ಪೊಲೀಸರಿಗೆ ಸೂಚಿಸಿದೆ.
ಬಜರಂಗದಳದ ಸ್ಥಳೀಯ ನಾಯಕ ಬೆದರಿಕೆ ಒಡ್ಡುತ್ತಿರುವ ವೈರಲ್ ವೀಡಿಯೊವನ್ನು ಪರಿಶೀಲನೆ ನಡೆಸಿರುವ ಕಚರ್‌ನ ಉಪ ಆಯುಕ್ತ ಕೀರ್ತಿ ಜಲ್ಲಿ, ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳುವಂತೆ ರವಿವಾರ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದ್ದಾರೆ.
ಆದರೆ, ನಾವು ಯಾವುದೇ ದೂರು ಸ್ವೀಕರಿಸಿಲ್ಲ. ಆದುದರಿಂದ ವೀಡಿಯೊ ನೋಡಿದ ಬಳಿಕ ಘಟನೆ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಡಿಸೆಂಬರ್ 3ರಂದು ನಡೆದ ಬಜರಂಗ ದಳದ ಸದಸ್ಯರ ಸಭೆಯಲ್ಲಿ ಮಾತನಾಡಿದ ಸಂಘಟನೆಯ ಕಚರ್‌ನ ಉಸ್ತುವಾರಿ ಮಿಥುನ್ ನಾಥ್, ಕ್ರಿಸ್ಮಸ್ ಸಂದರ್ಭ ಹಿಂದೂಗಳ ಚರ್ಚ್ ಭೇಟಿಗೆ ಅವಕಾಶ ನೀಡಬಾರದು ಎಂದು ಹೇಳಿದ್ದರು.
‘‘ಚರ್ಚ್‌ಗಳಿಗೆ ಭೇಟಿ ನೀಡುವ ಹಿಂದೂಗಳಿಗೆ ಥಳಿಸಲಾಗುವುದು. ಕ್ರೈಸ್ತರು ನಮ್ಮ ದೇವಾಲಯಗಳನ್ನು ಮುಚ್ಚಲಿದ್ದಾರೆ. ಆದರೆ, ನಾವು ಅವರ ಚರ್ಚ್‌ಗಳಿಗೆ ತೆರಳಿ ಸಂಭ್ರಮ ಆಚರಿಸುತ್ತೇವೆ. ಅಂತಹ ಹಿಂದೂಗಳನ್ನು ನಾನು ಖಂಡಿಸುತ್ತೇನೆ. ಅವರಿಗೆ ಒಂದು ಪಾಠ ಕಲಿಸುವ ಅಗತ್ಯ ಇದೆ’’ ಎಂದು ಅವರು ಹೇಳಿದ್ದರು.
‘‘ಮುಂದಿನ ಕ್ರಿಸ್ಮಸ್ ಸಂದರ್ಭ ಯಾವುದೇ ಹಿಂದೂಗೆ ಚರ್ಚ್ ಭೇಟಿಗೆ ಅವಕಾಶ ನೀಡಲಾರೆವು ಎಂದು ನಾವು ಇಂದು ಘೋಷಿಸುತ್ತೇವೆ. ಯಾರಾದರೂ ಚರ್ಚ್‌ಗೆ ಭೇಟಿ ನೀಡಿದರೆ, ಬಜರಂಗದಳ ಸೂಕ್ತ ಕ್ರಮ ಕೈಗೊಳ್ಳಲಿದೆ’’ ಎಂದು ನಾಥ್ ಹೇಳಿದ್ದರು.
ಕ್ರೈಸ್ತರು ಬಹುಸಂಖ್ಯಾತರಾಗಿರುವ ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ರಾಮಕೃಷ್ಣ ಮಿಷನ್‌ನ ಭಾಗವಾದ ವಿವೇಕಾನಂದ ಕೇಂದ್ರವನ್ನು ಮುಚ್ಚಿರುವುದನ್ನು ನಾಥ್ ಉಲ್ಲೇಖಿಸಿದ್ದರು.







