200 ರೂಪಾಯಿಗೆ ಲೀಸ್‌ಗೆ ಪಡೆದ ಜಮೀನಿನಲ್ಲಿ ರೈತರಿಗೆ ಖುಲಾಯಿಸಿದ ಅದೃಷ್ಟ !

ಭೋಪಾಲ್ : ಒಂದು ತಿಂಗಳ ಹಿಂದೆ ಕೇವಲ 200 ರೂಪಾಯಿಗೆ ಭೋಗ್ಯಕ್ಕೆ ಪಡೆದ 100 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಅಗೆಯುವ ವೇಳೆ ರೈತನೊಬ್ಬನಿಗೆ 60 ಲಕ್ಷ ರೂ. ಮೌಲ್ಯದ ವಜ್ರ ದೊರಕಿದ್ದು, ರಾತ್ರೋರಾತ್ರಿ ಆತ ಲಕ್ಷಾಧೀಶನಾದ ಘಟನೆ ವರದಿಯಾಗಿದೆ.
ಲಖನ್ ಯಾದವ್ (45) ಎಂಬ ರೈತ ಈ ಜಾಗದಲ್ಲಿ ಅಗೆಯುತ್ತಿದ್ದಾಗ 14.98 ಕ್ಯಾರೆಟ್ ವಜ್ರ ದೊರಕಿದ್ದು, ಇದರ ಮೌಲ್ಯ 60.6 ಲಕ್ಷ ರೂ. ಎನ್ನಲಾಗಿದೆ.
"ಇದು ನನ್ನ ಜೀವನ ಬದಲಿಸಿದೆ" ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಯಾದವ್ ಉದ್ಗರಿಸಿದರು. ಜಮೀನಿನಲ್ಲಿದ್ದ ಕಲ್ಲುಗಳು, ಹರಳುಗಳನ್ನು ಅಗೆದಾಗ ಒಂದು ಹರಳು ಮಾತ್ರ ಭಿನ್ನವಾಗಿ ಕಂಡ ಕ್ಷಣ ಅವಿಸ್ಮರಣೀಯ ಎಂದು ಅವರು ಹೇಳುತ್ತಾರೆ. ಹರಳಿನ ಮೇಲಿದ್ದ ದೂಳನ್ನು ಕೊಡವಿದಾಗ ಅದು ಹೊಳೆಯಲಾರಂಭಿಸಿತು. ಆಗ ಸಹಜವಾಗಿಯೇ ಹೃದಯ ಬಡಿತ ಹೆಚ್ಚಾಯಿತು. ಜಿಲ್ಲಾ ವಜ್ರಾಧಿಕಾರಿ ಬಳಿ ಇದನ್ನು ಒಯ್ದು ತೋರಿಸಿದಾಗ ಅದು ವಜ್ರ ಎನ್ನುವುದನ್ನು ಖಚಿತಪಡಿಸಿದರು.
"ನಾನು ಯಾವುದೇ ದೊಡ್ಡ ಯೋಚನೆ ಮಾಡಿಲ್ಲ. ನಾನು ಸುಶಿಕ್ಷಿತನಲ್ಲ. ಈ ಹಣವನ್ನು ನಾನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಬಂದ ಬಡ್ಡಿ ಹಣದಿಂದ ನಾಲ್ವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತೇನೆ"’ ಎಂದು ಯಾದವ್ ಹೇಳಿದ್ದಾರೆ.
ಪನ್ನಾ ರಾಷ್ಟ್ರೀಯ ಉದ್ಯಾನವನ ನಿರ್ಮಾಣ ವೇಳೆ ಗ್ರಾಮವನ್ನು ತೆರವುಗೊಳಿಸಲಾಗಿದ್ದು, ಯಾದವ್ ಕುಟುಂಬವನ್ನು ಒಕ್ಕಲೆಬ್ಬಿಸಲಾಗಿತ್ತು. ಬಂದ ಪರಿಹಾರ ಮೊತ್ತದಲ್ಲಿ 2 ಹೆಕ್ಟೇರ್ ಜಮೀನು, ಎರಡು ಎಮ್ಮೆ ಖರೀದಿಸಿದ್ದ ವಜ್ರವನ್ನು ಜಿಲ್ಲೆಯ ಅಧಿಕಾರಿಗೆ ನೀಡಿದ್ದಕ್ಕಾಗಿ ಬಂದ ಒಂದು ಲಕ್ಷ ಮೊತ್ತದಲ್ಲಿ ಮೋಟರ್ ಸೈಕಲ್ ಖರೀದಿಸಿದ್ದಾರೆ.







