ಆಂಧ್ರಪ್ರದೇಶ : ನಿಗೂಢ ಕಾಯಿಲೆಗೆ ಓರ್ವ ಬಲಿ, 300 ಮಂದಿ ಆಸ್ಪತ್ರೆಗೆ ದಾಖಲು

ಆಂಧ್ರಪ್ರದೇಶ : ಆಂಧ್ರಪ್ರದೇಶದ ಎಲೂರು ಪಟ್ಟಣದಲ್ಲಿ ಕಾಣಿಸಿಕೊಂಡ ನಿಗೂಢ ಕಾಯಿಲೆಯಿಂದ ಒಬ್ಬ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದಿಢೀರನೇ ಅಸ್ವಸ್ಥಗೊಂಡು ಪ್ರಜ್ಞೆ ಕಳೆದುಕೊಳ್ಳುವುದು, ಬಾಯಲ್ಲಿ ನೊರೆ ಕಾಣಿಸಿಕೊಳ್ಳುವುದು ಮತ್ತು ತೀವ್ರ ನಡುಕ ಇದರ ಪ್ರಮುಖ ಲಕ್ಷಣಗಳಾಗಿದ್ದು, ನಿಗೂಢ ಕಾಯಿಲೆಗೆ ನಗರದ ಜನ ಬೆಚ್ಚಿ ಬಿದ್ದಿದ್ದಾರೆ.
ಮೃತಪಟ್ಟ ವ್ಯಕ್ತಿ ಎಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯಾಧಿಕಾರಿಗಳಿಗೆ ಈ ರೋಗದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಯಾವುದೇ ಸಾಂಕ್ರಾಮಿಕದ ಸಂಪರ್ಕ ಇಲ್ಲದ ವಿಶಾಲ ಪ್ರದೇಶದಲ್ಲಿ ವಾಸವಿರುವವರಲ್ಲೂ ಈ ಅಸ್ವಸ್ಥತೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಶನಿವಾರ ಎಲೂರು ಪಟ್ಟಣದ ಬೇರೆ ಬೇರೆ ಕಡೆಗಳ 45 ಮಂದಿಗೆ ವಿಚಿತ್ರ ರೋಗ ಲಕ್ಷಣ ಕಾಣಿಸಿಕೊಂಡಾಗಿನಿಂದ ಈ ಸಮಸ್ಯೆ ತಲೆದೋರಿದೆ. ಇದೇ ರೋಗ ಲಕ್ಷಣ ಹಿನ್ನೆಲೆಯಲ್ಲಿ 46 ಮಂದಿ ಮಕ್ಕಳು ಮತ್ತು 70 ಮಹಿಳೆಯರು ಸೇರಿ 300ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕೆ ಏನು ಕಾರಣ ಎನ್ನುವುದು ಸ್ಪಷ್ಟವಾಗಿಲ್ಲ.
ನೀರು ಅಥವಾ ಆಹಾರ ಕಲಬೆರಕೆ ಸಾಧ್ಯತೆಯನ್ನು ಸ್ಥಳೀಯ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಈ ವಿಚಿತ್ರ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡುವ ಸಂಬಂಧ ದೆಹಲಿ ಏಮ್ಸ್ ತಜ್ಞ ವೈದ್ಯರ ತಂಡ ಎಲೂರು ಆಸ್ಪತ್ರೆ ವೈದ್ಯರ ಜತೆ ಚರ್ಚೆ ನಡೆಸಿದೆ. ಸೆಲೆಬ್ರಲ್-ಬೆನ್ನುಹುರಿ ದ್ರವದ ಮಾದರಿಯನ್ನು ವಿಜಯವಾಡ ಮತ್ತು ವಿಶಾಖಪಟ್ಟಣಂ ಪ್ರಯೋಗಾಲಯಗಳಿಗೆ ಕಳುಹಿಸಿದ್ದು, ವರದಿ ಬಂದ ಬಳಿಕ ನಿಖರವಾದ ಕಾರಣ ತಿಳಿಯಲಿದೆ ಎಂದು ವೈದ್ಯರು ಹೇಳಿದ್ದಾರೆ.







