ಪತ್ರಕರ್ತ ಅಮೀಶ್ ದೇವಗನ್ ವಿರುದ್ಧದ ಎಫ್‍ಐಆರ್ ಗಳನ್ನು ರದ್ದುಗೊಳಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಧಾರ್ಮಿಕ ಭಾವನೆ ಧಕ್ಕೆ ಉಂಟು ಮಾಡಿದ ಆರೋಪ ಎದುರಿಸುತ್ತಿರುವ 'ನ್ಯೂಸ್ 18' ಟಿವಿ ವಾಹಿನಿಯ ಆ್ಯಂಕರ್ ಅಮೀಶ್ ದೇವಗನ್ ಅವರ ವಿರುದ್ಧ ದಾಖಲಾಗಿರುವ ಹಲವು ಪ್ರಕರಣಗಳನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಆದರೆ ಯಾವುದೇ ಬಲವಂತದ ಕ್ರಮದಿಂದ ಅವರಿಗೆ ಜುಲೈ 8ರಂದು ನೀಡಲಾದ ಮಧ್ಯಂತರ ರಕ್ಷಣೆಯನ್ನು, ಅವರು ತನಿಖೆಗೆ ಸಹಕರಿಸಬೇಕೆಂಬ ಷರತ್ತಿನೊಂದಿಗೆ ಸುಪ್ರೀಂ ಕೋರ್ಟ್ ವಿಸ್ತರಿಸಿದೆ.
ವಿವಿಧ ರಾಜ್ಯಗಳಲ್ಲಿ ಅಮೀಶ್ ದೇವಗನ್ ವಿರುದ್ಧ ದಾಖಲಾಗಿರುವ ಎಫ್‍ಐಆರ್‍ಗಳನ್ನು ಒಂದುಗೂಡಿಸಿ ಎಲ್ಲಾ ಪ್ರಕರಣಗಳನ್ನು ರಾಜಸ್ಥಾನದ ಆಜ್ಮೀರ್ ನ್ಯಾಯಾಲಯಕ್ಕೆ ಜಸ್ಟಿಸ್ ಎ ಎಂ ಖನ್ವಿಲ್ಕರ್ ಹಾಗೂ ಜಸ್ಟಿಸ್ ಸಂಜೀವ್ ಖನ್ನಾ ಅವರ ಪೀಠ ವರ್ಗಾಯಿಸಿದೆ. ಅಮೀಶ್ ವಿರುದ್ಧ ರಾಜಸ್ಥಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಒಟ್ಟು ಏಳು ಎಫ್‍ಐಆರ್ ದಾಖಲಾಗಿವೆ.
ತಮ್ಮ ಜೂನ್ 15ರ ಟಿವಿ ಕಾರ್ಯಕ್ರಮದಲ್ಲಿ ಅವರು ನಿಂದನಾತ್ಮಕ ಹೇಳಿಕೆ ನೀಡಿ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆಂಬ ಆರೋಪ ಅವರ ಮೇಲಿದೆ.





