'ಮನ್ ಕಿ ಬಾತ್'ನಲ್ಲಿ ಪ್ರಧಾನಿ ಶ್ಲಾಘಿಸಿದ ಕೃಷಿಕನಿಂದ ರೈತರ ಹೋರಾಟಕ್ಕೆ ಬೆಂಬಲ

ಹೊಸದಿಲ್ಲಿ: ಸರಕಾರದ ನೂತನ ಕೃಷಿ ಕಾನೂನುಗಳ ಸದುಪಯೋಗ ಪಡೆದು ವರ್ತಕರೊಬ್ಬರಿಂದ ತನಗೆ ಬರಬೇಕಿದ್ದ ಬಾಕಿ ಹಣವನ್ನು ಗಳಿಸುವಲ್ಲಿ ಸಫಲರಾದ ಗ್ರಾಮೀಣ ಮಹಾರಾಷ್ಟ್ರದ ಧುಳೆ ಜಿಲ್ಲೆಯ ಶಿರ್ಪುರ್ ತಾಲೂಕಿನ ಭಟನೆ ನಿವಾಸಿಯಾಗಿರುವ ರೈತರೊಬ್ಬರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು. ಇಂದು ಅದೇ ರೈತ ದಿಲ್ಲಿ ಗಡಿಯಲ್ಲಿ ಕಳೆದ 12 ದಿನಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದಾರೆ.
ತನ್ನ ಬಾಕಿ ಹಣವನ್ನು ಎಸ್‍ಡಿಎಂ ಬಳಿ ದೂರು ದಾಖಲಿಸಿ ವರ್ತಕನಿಂದ ಪಡೆಯಲು ಸಾಧ್ಯವಾಯಿತಾದರೂ ತಾನು ಬಹಳಷ್ಟು ನಷ್ಟ ಅನುಭವಿಸಿರುವುದರಿಂದ ರೈತರ ಪ್ರತಿಭಟನೆಗಳನ್ನು ಬೆಂಬಲಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಹೊಸ ಕೃಷಿ ಕಾನೂನುಗಳಲ್ಲಿ ಎಂಎಸ್‍ಪಿ ಕುರಿತು ಇನ್ನಷ್ಟು ಸ್ಪಷ್ಟತೆಯಿರಬೇಕೆಂದೂ ಪ್ರಧಾನಿಗೆ ಮನವಿ ಮಾಡಲು ಬಯಸುವುದಾಗಿ ಎಂದು ರೈತ ಜಿತೇಂದ್ರ ಭೋ ಅವರು ಹೇಳಿದರು.
"ನನ್ನ ಕೃಷಿ ಉತ್ಪನ್ನವನ್ನು ಎಂಎಸ್‍ಪಿಯಂತೆ ಮಾರಾಟ ಮಾಡಿದ್ದರೆ ನನಗೆ ಲಾಭವಾಗುತ್ತಿತ್ತು. ಆದರೆ ಮೆಕ್ಕೆ ಜೋಳದ ಎಂಎಸ್‍ಪಿ ರೂ. 1850 ಆಗಿದ್ದರೂ ನಾನು ಅದನ್ನು ಕ್ವಿಂಟಾಲ್‍ಗೆ ರೂ. 1,240ರಂತೆ ಮಾರಾಟ ಮಾಡುವಂತಾಯಿತು. ಆದುದರಿಂದ ಪ್ರತಿ ಕ್ವಿಂಟಾಲ್‍ಗೆ ನಾನು ರೂ. 600ರಷ್ಟು ನಷ್ಟ ಅನುಭವಿಸಿದೆ,'' ಎಂದು ಅವರು ಹೇಳಿದ್ದಾರೆ.





