ಮಾಂಡ್ ಸೋಭಾಣ್‌ನಿಂದ ತಿಂಗಳ ವೇದಿಕೆ ಕಾರ್ಯಕ್ರಮ

ಮಂಗಳೂರು, ಡಿ.7: ಕೊರೋನ ಕಾಲದ ಏಕತಾನತೆಯನ್ನು ಮರೆಸಲು ಶಕ್ತಿನಗರದ ಕಲಾಂಗಣದಲ್ಲಿ ತಿಂಗಳ ವೇದಿಕೆ ಸರಣಿಯ 227ನೇ ಕಾರ್ಯಕ್ರಮವು ರವಿವಾರ ನಡೆಯಿತು.
ಕೊಂಕಣಿಯ ಸಾಂಸ್ಕೃತಿಕ ಸಂಘಟನೆ ‘ಮಾಂಡ್ ಸೊಭಾಣ್’ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಒಲ್ವಿನ್ ರಾಡ್ರಿಗಸ್ ಘಂಟೆ ಬಾರಿಸಿ ಚಾಲನೆ ನೀಡಿದರು. ಅಧ್ಯಕ್ಷ ಲುವಿ ಪಿಂಟೊ, ಸಂಘಟಕ ಸ್ಟ್ಯಾನಿ ಆಲ್ವಾರಿಸ್, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ನಂತರ ಸುಮೇಳ್, ಕಲಾಕುಲ್ ಹಾಗೂ ನಾಚ್ ಸೊಭಾಣ್ ಇದರ 75 ಕಲಾವಿದರು ಅರುಣ್‌ರಾಜ್ ರಾಡ್ರಿಗಸ್ ಪರಿಕಲ್ಪನೆಯಲ್ಲಿ ಮೂಡಿ ಬಂದ ‘ಯೆವಾ ನಾಚಾ ತೆಂಚಾ ವಾಂಗ್ಡಾ’ (ಬನ್ನಿ ಅವರ ಸಂಗಡ ಕುಣಿಯೋಣ) ಕಾರ್ಯಕ್ರಮವನ್ನು ಸಾದರಪಡಿಸಿದರು. ಇದರಲ್ಲಿ ಕ್ರಿಸ್ಮಸ್ ಸಂಬಂಧಿ ಹಾಡುಗಳು, ನೃತ್ಯಗಳು, ಕಿರುನಾಟಕ, ವಾಮಂಜೂರಿನ ನ್ಯೂಸ್ಟಾರ್ ಬ್ರಾಸ್ ಬ್ಯಾಂಡ್ ತಂಡದ ಬ್ಯಾಂಡ್ ವಾದನ ಹಾಗೂ ಆಲ್ವಿನ್ ಬಜ್ಪೆ ತಂಡದ ಕ್ರಿಸ್ಮಸ್ ಆಟ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಎರಿಕ್ ಒಝೇರಿಯೊ ಸಂಗೀತ ನಿರ್ದೇಶನ, ವಿಕಾಸ್ ಲಸ್ರಾದೊ ನಾಟಕ ನಿರ್ದೇಶನ ಹಾಗೂ ರಾಹುಲ್ ಪಿಂಟೊ ನೃತ್ಯ ಸಂಯೋಜನೆ ನೀಡಿದ್ದರು. ಪ್ರೇಕ್ಷಕರಿಗೆ ಕುಸ್ವಾರ್ (ಕ್ರಿಸ್ಮಸ್ ಸಿತಿಂಡಿ) ನೀಡಲಾಯಿತು.





