ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ತಕ್ಷಣ ಪರಿಹಾರ ನೀಡಬೇಕು: ಸಿದ್ದರಾಮಯ್ಯ

ಬೆಂಗಳೂರು, ಡಿ.7: ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡು ತಗಡಿನ ಶೆಡ್‍ಗಳಲ್ಲಿ ವಾಸವಾಗಿರುವವರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸರಕಾರ ತಕ್ಷಣ ಪರಿಹಾರ ನೀಡಬೇಕು. ಸುಮಾರು 55 ಸಾವಿರ ಮನೆಗಳಿಗೆ ಹಾನಿಯಾಗಿದೆ, 55 ಲಕ್ಷ ಎಕರೆ ಪ್ರದೇಶದಲ್ಲಿ ಹಾನಿಯಾಗಿರುವ ಬೆಳೆಗೆ ರೈತರಿಗೆ ಪರಿಹಾರ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ರಾಜ್ಯದಲ್ಲಿ ಸಂಭವಿಸಿರುವ ನೆರೆ ಹಾವಳಿಯಿಂದ ಸಂತ್ರಸ್ತರಾಗಿರುವವರಿಗೆ ಪರಿಹಾರ ಕೊಡುವ ಸಂಬಂಧ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ನೂರು ವರ್ಷಗಳಲ್ಲೆ ಕಂಡು ಕೇಳರಿಯದಂತಹ ಪ್ರವಾಹ 201920ರ ಆಗಸ್ಟ್ ನಲ್ಲಿ ಬಂತು. 19 ಜಿಲ್ಲೆಗಳ 123 ತಾಲೂಕುಗಳು ಪ್ರವಾಹ ಪೀಡಿತವಾದವು. ಕೃಷ್ಣಾ ಹಾಗೂ ಹಲವು ಉಪ ನದಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಹರಿದು, ಹಲವಾರು ಗ್ರಾಮಗಳು ಜಲಾವೃತವಾದವು. 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಯಿತು. 2.47 ಲಕ್ಷ ಮನೆಗಳು ಸಂಪೂರ್ಣ ಹಾಳಾದವು. ಆದರೆ, ಪರಿಹಾರ ಕೊಟ್ಟಿದ್ದು 1.26 ಲಕ್ಷ ಮನೆಗಳಿಗೆ ಮಾತ್ರ. ಇನ್ನೂ 1 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪರಿಹಾರ ಕೊಡಲು ಆಗಿಲ್ಲ ಎಂದರು.
2020-21ರಲ್ಲಿ ಮೂರು ಬಾರಿ ಪ್ರವಾಹ ಬಂದಿದೆ. 25 ಜಿಲ್ಲೆಗಳು 180 ತಾಲೂಕುಗಳಲ್ಲಿ ಪ್ರವಾಹ ಬಂದಿದೆ. 21 ಲಕ್ಷ ಹೆಕ್ಟೇರ್(55 ಲಕ್ಷ ಎಕರೆ) ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆಗಸ್ಟ್ 1 ರಿಂದ ಸೆ.15ರವರೆಗೆ ಒಂದು ಹಂತದ ಪ್ರವಾಹ, ಸೆ.15 ರಿಂದ ಸೆ.30ರವರೆಗೆ ಎರಡನೆ ಹಂತ, ಅ.10 ರಿಂದ ಅ.20ರವರೆಗೆ ಮೂರನೆ ಹಂತದ ಪ್ರವಾಹ ಬಂತು. ಕಳೆದ ವರ್ಷಕ್ಕಿಂತ ಈ ಬಾರಿ ಶೇ.15ರಷ್ಟು ಹೆಚ್ಚು ಬಿತ್ತನೆಯಾಗಿದೆ. ಅದರಲ್ಲಿ ಶೇ.25ರಷ್ಟು ಬೆಳೆ ಹಾನಿಯಾಗಿದೆ. 7535 ಕಿ.ಮೀ.ರಸ್ತೆ, 603 ಸೇತುವೆ, 101 ಕೆರೆ ಕಟ್ಟೆಗಳು, 2,570 ಸರಕಾರಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅವರು ಹೇಳಿದರು.
ಸರಕಾರದ ಮಾಹಿತಿ ಪ್ರಕಾರ 49.48 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 1,935 ಪ್ರಾಣ ಹಾನಿಯಾಗಿದೆ. 48,424 ಮನೆಗಳಿಗೆ ಹಾನಿಯಾಗಿದೆ. 37,806 ಕಿ.ಮಿ.ರಸ್ತೆ, 4,086 ಸೇತುವೆ, 650 ಕೆರೆ ಕಟ್ಟೆಗಳು, 6,706 ಸರಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ಒಟ್ಟಾರೆ, 24,941.73 ಕೋಟಿ ರೂ.ನಷ್ಟ ಎಂದು ಹೇಳಿದೆ. ಈರುಳ್ಳಿ, ಟೊಮಾಟೊ, ಹೆಸರು, ಉದ್ದು, ತೊಗರಿ, ಮೆಣಸಿನಕಾಯಿ, ಕಬ್ಬು, ಭತ್ತ ಸೇರಿದಂತೆ ಹಲವಾರು ಬೆಳೆಗಳು ಹಾನಿಯಾಗಿವೆ. ಆದರೆ, ಹಲವಾರು ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗಿ ಜನರ ಕಣ್ಣೀರು ಒರೆಸಿ, ಸಾಂತ್ವನ ಹೇಳುವ ಕೆಲಸ ಮಾಡಿಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದರು.
ರಾಜ್ಯದಲ್ಲಿ ಬಿಜೆಪಿಯ 25 ಸಂಸದರು ಗೆದ್ದಿದ್ದಾರೆ. ಒಂದು ದಿನವಾದರೂ ಪ್ರಧಾನಿ, ಗೃಹ ಸಚಿವರು, ಕೃಷಿ, ಕಂದಾಯ ಸಚಿವರನ್ನು ಭೇಟಿ ಮಾಡಿ ರಾಜ್ಯಕ್ಕೆ ಬರಬೇಕಿರುವ ಪರಿಹಾರವನ್ನು ಕೇಳಿದ್ದಾರಾ? ಕಳೆದ ವರ್ಷವೂ ಕೇಳಲಿಲ್ಲ. ಈ ಬಾರಿಯೂ ಕೇಳಿಲ್ಲ. ನಮ್ಮ ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಿಗೆ ಪ್ರಧಾನಿ ಭೇಟಿ ನೀಡಿಲ್ಲ. ನಮಗೆ ಜಿಎಸ್‍ಟಿ ಪರಿಹಾರ ಕೊಟ್ಟಿಲ್ಲ, ನೆರೆ ಹಾವಳಿಗೂ ಸೂಕ್ತ ಪರಿಹಾರ ಕೊಟ್ಟಿಲ್ಲ. 15ನೆ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ 5,495 ಕೋಟಿ ರೂ.ವಿಶೇಷ ಅನುದಾನ ನೀಡುವಂತೆ ಶಿಫಾರಸ್ಸು ಮಾಡಿದರೂ, ನಮ್ಮ ರಾಜ್ಯದಿಂದಲೆ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವರು ಅದನ್ನು ತಿರಸ್ಕರಿಸಿದ್ದಾರೆ ಎಂದು ಅವರು ಕಿಡಿಗಾರಿದರು.
ನಮ್ಮ ಸರಕಾರ ಅವರಿಗೆ ಈ ಸಂಬಂಧ ಒಂದು ಪತ್ರ ಬರೆದಿರಬಹುದು ಅಷ್ಟೇ. ಆದರೆ, ನಮಗೆ ಬರಬೇಕಾದ ವಿಶೇಷ ಅನುದಾನವನ್ನು ಪಡೆಯುವಲ್ಲಿ ಯಾವುದೆ ಪ್ರಯತ್ನ ಮಾಡಿಲ್ಲ. ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ, ಸರಕಾರದ ಖಜಾನೆ ಖಾಲಿಯಾಗಿದೆ. ವಿತ್ತೀಯ ನಿರ್ವಹಣೆ ಕಾಯ್ದೆಗೆ ತಿದ್ದುಪಡಿ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆಯಲು ಮುಂದಾಗಿದೆ. ಮಿತವ್ಯಯ ಮಾಡಿ ಎಂದರೆ ನಮ್ಮ ಸಲಹೆ ಕೇಳಿಲ್ಲ. ನಿಗಮ, ಮಂಡಳಿಗಳಿಗೆ ನೇಮಕಾತಿಗಳನ್ನು ಮಾಡುತ್ತಿದೆ. ಯೋಜನೇತರ ವೆಚ್ಚವನ್ನು ಕಡಿತ ಮಾಡಿ, ರೈತರಿಗೆ ನೆರವು ನೀಡಿ ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಹಣಕಾಸು ಆಯೋಗ ಮಾಡುವ ಎಲ್ಲ ಶಿಫಾರಸ್ಸುಗಳನ್ನು ಕೇಂದ್ರ ಸರಕಾರ ಒಪ್ಪಿಕೊಳ್ಳಲೇಬೇಕು ಎಂಬ ನಿಯಮವಿಲ್ಲ. ಕೇಂದ್ರ ಸರಕಾರವು ತನ್ನ ಆರ್ಥಿಕ ಪರಿಸ್ಥಿತಿಯ ಅನುಗುಣವಾಗಿ ಹಣಕಾಸು ಆಯೋಗದ ಶಿಫಾರಸ್ಸುಗಳ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ. ನಮ್ಮ ರಾಜ್ಯಕ್ಕೆ ಬರಬೇಕಿರುವ ಅನುದಾನಗಳನ್ನು ಪಡೆಯಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಪ್ರವಾಹದಿಂದ 24,941.73 ಕೋಟಿ ರೂ.ನಷ್ಟ ಆಗಿದೆ. ಎನ್‍ಡಿಆರ್‍ಎಫ್ ಪ್ರಕಾರ 2,384 ಕೋಟಿ ರೂ.ಎಂದು ಅಂದಾಜಿಸಲಾಗಿದೆ. ಆದರೆ, ಕೇಂದ್ರ ಸರಕಾರ ಕೊಟ್ಟಿರುವುದು 577 ಕೋಟಿ ರೂ. . 2019-20ರಲ್ಲಿ ಪ್ರವಾಹ ಬಂದಾಗ 35 ಸಾವಿರ ಕೋಟಿ ರೂ.ನಷ್ಟವಾಗಿತ್ತು. ಕೇಂದ್ರ ಕೊಟ್ಟಿದ್ದು 1,652 ಕೋಟಿ ರೂ. ಮಾತ್ರ. ಈ ವರೆಗೆ ಬೆಳೆ ಪರಿಹಾರಕ್ಕೆ ಕೊಟ್ಟಿರುವುದು 110 ಕೋಟಿ ರೂ.ಮಾತ್ರ. ಮೂಲಭೂತ ಸೌಕರ್ಯ, ರಸ್ತೆಗಳ ದುರಸ್ತಿಗೆ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರದಿಂದ ಬಂದಿರುವ 577 ಕೋಟಿ ರೂ.ಗಳಲ್ಲಿ ಯಾರಿಗೆ ಎಷ್ಟು ಕೊಟ್ಟಿದ್ದಾರೆ ಗೊತ್ತಿಲ್ಲ. ಸರಕಾರಕ್ಕೆ ಅದಕ್ಕೆ ಲೆಕ್ಕ ಕೊಡಬೇಕು. ಪಶ್ಚಿಮ ಬಂಗಾಲದಲ್ಲಿ ನಮಗಿಂತ ಕಡಿಮೆ ಪ್ರಮಾಣದ ಹಾನಿಯಾಗಿದ್ದರೂ ಚುನಾವಣೆ ಬರುತ್ತಿದೆ ಎಂದು 2,707 ಕೋಟಿ ರೂ.ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳಿಗೆ ಕೇಂದ್ರ ಸರಕಾರ ಸಮಾನ ಗೌರವ ಕೊಡಬೇಕು. ಆದರೆ, ಕೇಂದ್ರ ಸರಕಾರ ನಮ್ಮ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂಬುದು ನನ್ನ ಆರೋಪ. ನಾವು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಮುಖ್ಯಮಂತ್ರಿಗೆ ಮೂರು ಪತ್ರಗಳನ್ನು ಬರೆದಿದ್ದೇನೆ. ಒಂದು ಪತ್ರಕ್ಕೂ ಉತ್ತರ ಕೊಟ್ಟಿಲ್ಲ. ಅಧಿಕಾರಿಗಳಿಗೆ ಪತ್ರ ಬರೆದರೆ ಅವರೂ ಉತ್ತರ ಕೊಡಲ್ಲ, ಮಾಹಿತಿಯೂ ಕೊಡಲ್ಲ. ಒಬ್ಬ ವಿರೋಧ ಪಕ್ಷದ ನಾಯಕನ ಪತ್ರಗಳಿಗೆ ಸ್ಪಂದಿಸುತ್ತಿಲ್ಲ. ಸರಕಾರ ಬೇಜವಾಬ್ದಾರಿಯಿಂದ ವರ್ತಿಸಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಿಯಮಾವಳಿಗಳ ಪ್ರಕಾರವೇ ಪರಿಹಾರ
ಪಶ್ಚಿಮ ಬಂಗಾಳದಲ್ಲಿ ಸೈಕ್ಲೋನ್‍ನಿಂದಾಗಿ 1.42 ಲಕ್ಷ ಕೋಟಿ ರೂ.ನಷ್ಟವಾಗಿದೆ. ಎನ್‍ಡಿಆರ್‍ಎಫ್ ಪ್ರಕಾರ 5,171 ಕೋಟಿ ರೂ.ಕೊಡಬೇಕಿತ್ತು. ಆದರೆ, ಕೇಂದ್ರ ಕೊಟ್ಟಿದ್ದು 2,707 ಕೋಟಿ ರೂ.ಗಳನ್ನು. ಆದುದರಿಂದ, ಚುನಾವಣೆ ಬಂದಿದೆ ಎಂದು ಹೆಚ್ಚಿನ ಪ್ರಮಾಣದ ಪರಿಹಾರ ಏನು ಕೊಟ್ಟಿಲ್ಲ. ನಿಯಮಾವಳಿಗಳ ಪ್ರಕಾರವೆ ಪರಿಹಾರ ಕೊಡಲಾಗಿದೆ.
-ಆರ್.ಅಶೋಕ್, ಕಂದಾಯ ಸಚಿವ
ಕೇಂದ್ರದಿಂದ ತಾರತಮ್ಯ
ದೇಶದಲ್ಲಿ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳುನಾಡು ರಾಜ್ಯಗಳು ಹೆಚ್ಚಿನ ತೆರಿಗೆಯನ್ನು ನೀಡುತ್ತವೆ. ನಮ್ಮ ರಾಜ್ಯದಿಂದ 100 ರೂ.ತೆರಿಗೆ ಪಾವತಿ ಮಾಡಿದರೆ ನಮಗೆ ವಾಪಸ್ ಸಿಗುವುದು 22 ರೂ.ಗಳು ಮಾತ್ರ. ಅದೇ ತಮಿಳುನಾಡಿನವರಿಗೆ 34 ರೂ., ಉತ್ತರಪ್ರದೇಶಕ್ಕೆ 200 ರೂ., ಬಿಹಾರಕ್ಕೆ 400 ರೂ.ಹಂಚಿಕೆಯಾಗುತ್ತದೆ. ತೆರಿಗೆ ಪಾಲಿನ ಹಂಚಿಕೆಯಲ್ಲಿ ಆಗುತ್ತಿರುವ ಈ ತಾರತಮ್ಯವನ್ನು ದಕ್ಷಿಣ ಭಾರತದ ಎಲ್ಲ ರಾಜ್ಯಗಳು ವಿರೋಧ ಮಾಡಿದರೂ ಕೇಂದ್ರ ಸರಕಾರ ಮಾತ್ರ ಕಿವಿಗೊಡುತ್ತಿಲ್ಲ.
-ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಸದಸ್ಯ







