ಉದ್ಯೋಗಿಗಳಿಗೆ ರಕ್ಷಣೆ ನೀಡುವಂತೆ ಕೋರಿ ರಿಪಬ್ಲಿಕ್ ಟಿವಿ ಸಲ್ಲಿಸಿದ ಮನವಿ ವಿಚಾರಣೆಗೆ ಸುಪ್ರೀಂ ನಿರಾಕರಣೆ

ಹೊಸದಿಲ್ಲಿ, ಡಿ. 6: ರಿಪಬ್ಲಿಕ್ ಮೀಡಿಯ ನೆಟ್‌ವರ್ಕ್ ಸಮೂಹ ಹಾಗೂ ಅದರ ಉದ್ಯೋಗಿಗಳಿಗೆ ರಕ್ಷಣೆ ನೀಡುವಂತೆ ಕೋರಿ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಮಾಲಕತ್ವ ಹೊಂದಿರುವ ಎಆರ್‌ಜಿ ಔಟ್ಲಿಯರ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಅರ್ಜಿ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ನೇತೃತ್ವದ ನ್ಯಾಯ ಪೀಠ, ಮನವಿಯ ಎಲ್ಲ ಕೋರಿಕೆಗಳು ಮಹಾತ್ವಾಕಾಂಕ್ಷೆಯನ್ನು ಹೊಂದಿವೆ ಎಂದು ಹೇಳಿತು. ‘‘ಈ ಅರ್ಜಿ ಮಹತ್ವಾಕಾಂಕ್ಷೆಯ ಲಕ್ಷಣ ಹೊಂದಿದೆ. ಯಾವುದೇ ಉದ್ಯೋಗಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಬಾರದು ಹಾಗೂ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ನೀವು ಬಯಸಿದ್ದೀರಿ. ಆದುದರಿಂದ ನೀವು ಈ ಅರ್ಜಿ ಹಿಂದೆ ತೆಗೆಯುವುದು ಉತ್ತಮ’’ ಎಂದು ನ್ಯಾಯಮೂರ್ತಿ ಚಂದ್ರಚೂಡ ಅವರು ಎಆರ್‌ಜಿ ಔಟ್ಲಿಯರ್ ಮೀಡಿಯಾ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಮಿಲಿಂದ್ ಸಾಠೆ ಅವರಿಗೆ ತಿಳಿಸಿದರು.
ಮೀಡಿಯಾ ನೆಟವರ್ಕ್, ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಉದ್ಯೋಗಿಗಳನ್ನು ಮಹಾರಾಷ್ಟ್ರ ಪೊಲೀಸರು ಪೀಡಿಸುತ್ತಿರುವುದಕ್ಕೆ ತಡೆ ಕೋರಿ ಅವರು ಈ ಅರ್ಜಿ ಸಲ್ಲಿಸಿದ್ದಾರೆ ಎಂದು ಸಾಠೆ ನ್ಯಾಯಪೀಠಕ್ಕೆ ತಿಳಿಸಿದರು. ‘‘ನೀವು ಎಲ್ಲ ಪರಿಹಾರಗಳನ್ನು ಕೋರಿದ್ದೀರಿ ಹಾಗೂ ಇದನ್ನು ಒಂದೇ ಅರ್ಜಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ’’ ಎಂದು ನ್ಯಾಯಪೀಠ ತಿಳಿಸಿತು. ಅನಂತರ ಸಾಠೆ ಅರ್ಜಿ ಹಿಂದೆ ತೆಗೆಯುವುದಾಗಿ ತಿಳಿಸಿದರು. ಕಾನೂನು ಅಡಿಯಲ್ಲಿ ಲಭ್ಯವಿರುವ ಸೂಕ್ತ ಪರಿಹಾರವನ್ನು ತೆಗೆದುಕೊಳ್ಳುವ ಸ್ವಾತಂತ್ರದೊಂದಿಗೆ ಅರ್ಜಿಯನ್ನು ಹಿಂದೆ ತೆಗೆಯಲು ಸಾಠೆ ಅವರಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತು. ಮೀಡಿಯೂ ಗ್ರೂಪ್, ಅರ್ನಬ್ ಗೋಸ್ವಾಮಿ ಹಾಗೂ ಉದ್ಯೋಗಿಗಳಿಗೆ ರಕ್ಷಣೆ ನೀಡುವಂತೆ ಕೋರಿದ ಹೊರತಾಗಿ ಮನವಿ, ಮಹಾರಾಷ್ಟ್ರ ಸರಕಾರ ಅವರನ್ನು ಪೀಡಿಸುವುದನ್ನು ನಿಲ್ಲಿಸಬೇಕು, ಅವರ ವಿರುದ್ಧ ದಾಖಲಿಸಲಾದ ಎಲ್ಲಾ ಎಫ್‌ಐಆರ್ ಅನ್ನು ರದ್ದುಗೊಳಿಸಬೇಕು ಅಥವಾ ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಕೋರಿತ್ತು.







