ಭಾರತ್ ಬಂದ್ ಹೆಸರಿನಲ್ಲಿ ರೈತರ ದಾರಿ ತಪ್ಪಿಸುವ ಹುನ್ನಾರ : ಗಣೇಶ್ ಕಾರ್ಣಿಕ್ ಆರೋಪ
ಮಂಗಳೂರು, ಡಿ.7: ಕೇಂದ್ರ ಸರಕಾರ ಜಾರಿಗೆ ತಂದ ಕೃಷಿ ಮಸೂದೆಗಳು ಲೋಕಸಭೆಯ ಕೃಷಿ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಆಧರಿಸಿದೆ. ಸ್ಥಾಯಿ ಸಮಿತಿಯು ಬಹುತೇಕ ಎಲ್ಲಾ ಪಕ್ಷಗಳ ಸದಸ್ಯರನ್ನು ಒಳಗೊಂಡಿದೆ. ಡಿ.8ರಂದು ಕೃಷಿ ಮಸೂದೆಗಳನ್ನು ಮುಂದಿಟ್ಟು ಬಂದ್‌ಗೆ ಕರೆ ಕೊಟ್ಟಿರುವುದು ರೈತರನ್ನು ದಾರಿ ತಪ್ಪಿಸುವ ಹತಾಶ ಪ್ರಯತ್ನವಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾ.ಗಣೇಶ ಕಾರ್ಣಿಕ್ ಹೇಳಿದ್ದಾರೆ.
ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರು ಮೋಸ ಹೋಗಬಾರದು. ದೇಶದಲ್ಲಿ ರೈತ ರಿಗೆ ಮಾರುಕಟ್ಟೆ ಸಮಸ್ಯೆ ಇತ್ತು. ಬೆಳೆಗಳಿಗೆ ತಕ್ಕುದಾದ ಬೆಲೆ ಸಿಗುತ್ತಿರಲಿಲ್ಲ. ದಾಸ್ತಾನು ಮಾಡುವುದಕ್ಕೆ ವ್ಯವಸ್ಥೆ ಇರಲಿಲ್ಲ. ಮೂಲಭೂತ ಸೌಕರ್ಯಗಳ ಕೊರತೆ ಇತ್ತು. ಎಪಿಎಂಸಿ ಕಾಯ್ದೆ ಇದ್ದರೂ ಪ್ರತಿಶತ 92ರಷ್ಟು ಕೃಷಿಕರು ಮಧ್ಯವರ್ತಿಗಳ ಹಿಡಿತದಲ್ಲಿದ್ದರು ಎಂದು ಹೇಳಿದರು.
ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಕೃಷಿಕರನ್ನು ಮಧ್ಯವರ್ತಿಗಳ ಕಪಿಮುಷ್ಠಿಯಿಂದ ಹೊರ ತರುವ ಉದ್ದೇಶ ಹೊಂದಿದ್ದವು. ರೈತರ ಉತ್ಪನ್ನ ಗಳಿಗೆ ನ್ಯಾಯಯುತ ಬೆಲೆ, ಮೂಲಭೂತ ಸೌಕರ್ಯಗಳ ವೃದ್ಧಿಗೆ ಒಲವು ತೋರಿದ್ದವು ಮತ್ತು ತಮ್ಮ ಚುನಾವಣಾ ಪ್ರಣಾಳಿಕೆ ಅದನ್ನು ಪ್ರಕಟಿಸಿ ದ್ದವು. ಬಹುಮತ ಪಡೆದು ಆಡಳಿತಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ನೂತನ ಕಾಯ್ದೆಗಳ ಮೂಲಕ ಕೃಷಿಕರಿಗೆ ಅನುಕೂಲ ಮಾಡಿ ಕೊಡಲು ಮುಂದಾಗಿದೆ ಎಂದು ಕ್ಯಾ.ಕಾರ್ಣಿಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರವಿಶಂಕರ ಮಿಜಾರ್, ಸುಧೀರ್ ಶೆಟ್ಟಿ ಕಣ್ಣೂರು, ಜಗದೀಶ ಶೇಣವ ಮತ್ತಿತರರು ಉಪಸ್ಥಿತರಿದ್ದರು.







