2020ರಿಂದ ಲಿಂಗಾಂತರಿ ಕೈದಿಗಳ ದತ್ತಾಂಶ ಸಂಗ್ರಹ: ರಾಜ್ಯಗಳಿಗೆ ಕೇಂದ್ರದ ಸೂಚನೆ
ಹೊಸದಿಲ್ಲಿ, ಫೆ.6: 2020ರಿಂದ ಮೊದಲ್ಗೊಂಡು ಕಾರಾಗೃಹಗಳ ಅಂಕಿಅಂಶಗಳ ವರದಿಯಲ್ಲಿ ಲಿಂಗಾಂತರಿ ಕೈದಿಗಳ ದತ್ತಾಂಶಗಳನ್ನು ಕೂಡಾ ಸೇರ್ಪಡೆಗೊಳಿಸುವಂತೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಯನ್ನು ನೀಡಲಾಗಿದೆಯೆಂದು ಕೇಂದ್ರ ಸರಕಾರವು ಸೋಮವಾರ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ.
ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಹಾಗೂ ನ್ಯಾಯಮೂರ್ತಿ ಪ್ರತೀಕ್ ಜೈನ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ನೀಡಿದ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಕಾರಾಗೃಹ ಅಂಕಿಅಂಶ ವರದಿಯಲ್ಲಿ ಲಿಂಗಾಂತರಿ ಕೈದಿಗಳ ದತ್ತಾಂಶವನ್ನು ಸೇರ್ಪಡೆಗೊಳಿಸಲು ಅಗತ್ಯವಿರುವ ನೀತಿಗಳನ್ನು ರೂಪಿಸಲು ಹಾಗೂ ತಿದ್ದುಪಡಿ ಮಾಡಲು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)ಗೆ ನಿರ್ದೇಶನ ನೀಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್ ನ್ಯಾಯಪೀಠವು ಕೇಂದ್ರದಿಂದ ವಿವರಣೆಯನ್ನು ಕೋರಿತ್ತು.
ಡಿಸೆಂಬರ್ 4ರಂದೇ ಈ ಬಗ್ಗೆ ದೇಶಾದ್ಯಂತ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ ಕಾರಾಗೃಹಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಹಾಗೂ ಈ ಅರ್ಜಿಯ ವಿಚಾರಣೆಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟಿರ್ ಜನರಲ್, ನ್ಯಾಯಾಲಯಕ್ಕೆ ಮನವಿ ಮಾಡಿದರು.
ಸಾಲಿಸಿಟರ್ ಜನರಲ್ ಅವರ ಮನವಿಯನ್ನ ಪುರಸ್ಕರಿಸಿದ ನ್ಯಾಯಪೀಠವು ಕಾನೂನು ಪತ್ರಕರ್ತ ಹಾಗೂ ಕ್ರಿಮಿನಲ್ ನ್ಯಾಯಶಾಸ್ತ್ರ ಹಾಗೂ ಅಪರಾಧ ಶಾಸ್ತ್ರ ವಿಷಯಗಳ ಸ್ವತಂತ್ರ ಸಂಶೋಧಕ ಕರಣ್ ತ್ರಿಪಾಠಿಯವರ ಅರ್ಜಿಯನ್ನು ತಳ್ಳಿಹಾಕಿದೆ.







