ಪ್ರಶಸ್ತಿ ಹಿಂದಿರುಗಿಸಲು ರಾಷ್ಟ್ರಪತಿ ಭವನಕ್ಕೆ ಕ್ರೀಡಾಪಟುಗಳು ನಡೆಸಿದ ರ‍್ಯಾಲಿಗೆ ಪೊಲೀಸ್ ತಡೆ

ಹೊಸದಿಲ್ಲಿ, ಡಿ. 6: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ‘‘35 ರಾಷ್ಟ್ರೀಯ ಪ್ರಶಸ್ತಿ’’ಗಳನ್ನು ಹಿಂದಿರುಗಿಸಲು ಪಂಜಾಬ್‌ನಿಂದ ಸೋಮವಾರ ರಾಷ್ಟ್ರಪತಿ ಭವನಕ್ಕೆ ರ‍್ಯಾಲಿ ನಡೆಸಿದ ಎರಡು ಬಾರಿ ಏಷಿಯನ್ ಗೇಮ್‌ನ ಚಿನ್ನದ ಪದಕ ವಿಜೇತ ಮಾಜಿ ಕುಸ್ತಿಪಟು ಕರ್ತಾರ್ ಸಿಂಗ್ ನೇತೃತ್ವದ ಕೆಲವು ಕ್ರೀಡಾಪಟುಗಳನ್ನು ದಾರಿ ಮಧ್ಯೆ ಪೊಲೀಸರು ತಡೆದಿದ್ದಾರೆ.
1982ರಲ್ಲಿ ಅರ್ಜುನ ಪ್ರಶಸ್ತಿ ಪುರಷ್ಕೃತ ಹಾಗೂ 1987ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕರ್ತಾರ್ ಸಿಂಗ್ ಅವರೊಂದಿಗೆ ಒಲಿಂಪಿಂಕ್ ಚಿನ್ನ ವಿಜೇತ ಮಾಜಿ ಹಾಕಿ ಆಟಗಾರ ಗುರ್ಮೈಲ್ ಸಿಂಗ್ ಹಾಗೂ ಮಹಿಳಾ ಹಾಕಿ ತಂಡ ಮಾಜಿ ಕ್ಯಾಪ್ಟನ್ ರಾಜ್‌ಬೀರ್ ಕೌರ್ ಹಾಗೂ ಇತರರು ಇದ್ದರು. ಗುರ್ಮೈಲ್ 2014ರ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾಗಿದ್ದರೆ, ರಾಜ್‌ಬೀರ್ 1984ರಲ್ಲಿ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದರು.
‘‘ರೈತರು ಯಾವಾಗಲೂ ನಮಗೆ ಬೆಂಬಲ ನೀಡುತ್ತಾರೆ. ನಮ್ಮ ರೈತ ಸಹೋದರರ ಮೇಲೆ ಲಾಠಿಚಾರ್ಜ್ ನಡೆಸುತ್ತಿದ್ದಾರೆ. ರಸ್ತೆ ಬಂದ್ ಆಗಿದೆ. ಅವರು ತಮ್ಮ ಹಕ್ಕುಗಳಿಗಾಗಿ ತೀವ್ರ ಚಳಿಯಲ್ಲಿ ರಸ್ತೆಯಲ್ಲಿ ಧರಣಿ ನಡೆಸುತ್ತಿದ್ದಾರೆ. ಇದನ್ನು ನೋಡುವಾಗ ನಮಗೆ ಬೇಸರವಾಗುತ್ತದೆ’’ ಎಂದು 1978 ಹಾಗೂ 1986ರಲ್ಲಿ ಏಷಿಯನ್ ಗೇಮ್‌ನಲ್ಲಿ ಚಿನ್ನದ ಪದಕ ಪಡೆದ ಕರ್ತಾರ್ ಸಿಂಗ್ ಹೇಳಿದ್ದಾರೆ. ‘‘ನಾನು ರೈತನ ಮಗ, ಪೊಲೀಸ್ ಐಜಿಯಾಗಿದ್ದರೂ ನಾನು ಈಗಲೂ ಕೃಷಿ ಕೆಲಸ ಮಾಡುತ್ತಿದ್ದೇನೆ’’ ಎಂದು ಅವರು ಹೇಳಿದ್ದಾರೆ.
ಕ್ರೀಡಾಪಟುಗಳು ರವಿವಾರ ದಿಲ್ಲಿಗೆ ತಲುಪಿದರು. ಸೋಮವಾರ ಪ್ರೆಸ್ ಕ್ಲಬ್ ಆಫ್ ಇಂಡಿಯಾದಿಂದ ರ್ಯಾಲಿ ಆರಂಭಿಸಿದರು. ಆದರೆ, ಅವರನ್ನು ಕೃಷಿ ಭವನದ ಸಮೀಪ ಪೊಲೀಸರು ತಡೆದು ಹಿಂದೆ ಕಳುಹಿಸಿದರು. ‘‘ಕರಾಳ ಕಾಯ್ದೆಯನ್ನು ಹಿಂಪಡೆಯುವಂತೆ ನಾನು ಕೇಂದ್ರ ಸರಕಾರದಲ್ಲಿ ವಿನಂತಿಸುತ್ತಿದ್ದೇನೆ. ದೇಶ ಕೋರೊನಾದಿಂದ ತತ್ತರಿಸುತ್ತಿದೆ. ಈ ನಡುವೆ ಕೇಂದ್ರ ಸರಕಾರ ಎರಡೂ ಸದನಗಳಲ್ಲಿ ಈ ಮಸೂದೆಯನ್ನು ಮಂಜೂರು ಮಾಡಿದೆ. ಅಲ್ಲದೆ ರಾಷ್ಟ್ರಪತಿಯವರಿಂದ ಅಂಕಿತ ಹಾಕಿಸಿದೆ’’ ಎಂತು ಕರ್ತಾರ್ ಹೇಳಿದ್ದಾರೆ. ‘‘ಕೃಷಿ ಕಾಯ್ದೆಯಲ್ಲ್ಲಿ ಬದಲಾವಣೆ ತರಬೇಕು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ನಮ್ಮ ಮಕ್ಕಳು ಸಂತುಷ್ಟರಾಗದೇ ಇರುವಾಗ ಅವರನ್ನು ಸಂತುಷ್ಟಪಡಿಸಲು ಕೇಂದ್ರ ಸರಕಾರ ಆದ್ಯತೆ ನೀಡಬೇಕು. ವಿವಾದಾತ್ಮಕ ಕಾಯ್ದೆಯನ್ನು ರೈತರು ಒಪ್ಪಿಕೊಳ್ಳಬೇಕು ಎಂದು ಸರಕಾರ ಯಾಕೆ ಬಲವಂತ ಮಾಡುತ್ತಿದೆ’’ ಎಂದು ಕರ್ತಾರ್ ಪ್ರಶ್ನಿಸಿದ್ದಾರೆ.







