ಕಳೆದ ವರ್ಷ ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಅಮೆರಿಕ, ಚೀನಾ ಕಂಪೆನಿಗಳ ಪ್ರಾಬಲ್ಯ

ಸ್ಟಾಕ್‌ಹೋಮ್ (ಸ್ವೀಡನ್), ಡಿ. 7: 2019ರಲ್ಲಿ ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಅಮೆರಿಕ ಮತ್ತು ಚೀನಾಗಳ ಕಂಪೆನಿಗಳು ಪ್ರಾಬಲ್ಯ ಸಾಧಿಸಿವೆ ಎಂದು ‘ಸಿಪ್ರಿ’ ಸಂಶೋಧನಾ ಸಂಸ್ಥೆ ಸೋಮವಾರ ಬಿಡುಗಡೆ ಮಾಡಿರುವ ವರದಿಯೊಂದು ತಿಳಿಸಿದೆ. ಅದೇ ವೇಳೆ, 25 ಜಾಗತಿಕ ಶಸ್ತ್ರಾಸ್ತ್ರ ಉತ್ಪಾದಕರ ಪೈಕಿ ಮಧ್ಯಪ್ರಾಚ್ಯವೂ ಸ್ಥಾನ ಪಡೆದಿದೆ.
ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಮಾರಾಟವಾದ ಶಸ್ತ್ರಾಸ್ತ್ರಗಳ 61 ಶೇಕಡದಷ್ಟನ್ನು ಅಮೆರಿಕದ ಶಸ್ತ್ರಾಸ್ತ್ರ ಉದ್ಯಮ ಪೂರೈಸಿದೆ. ಇದರೊಂದಿಗೆ ಅದು ಚೀನಾದಿಂದ 15.7 ಶೇಕಡದಷ್ಟು ಮುಂದಿದೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ತಿಳಿಸಿದೆ.
ಜಗತ್ತಿನ 25 ಉನ್ನತ ಶಸ್ತ್ರ ಉತ್ಪಾದಕ ಕಂಪೆನಿಗಳ ಒಟ್ಟು ಮಾರಾಟದಲ್ಲಿ ಕಳೆದ ವರ್ಷ 8.5 ಶೇಕಡ ಏರಿಕೆಯಾಗಿದ್ದು, ಒಟ್ಟು ವ್ಯವಹಾರವು 361 ಬಿಲಿಯ ಡಾಲರ್ (ಸುಮಾರು 26.67 ಲಕ್ಷ ಕೋಟಿ ರೂಪಾಯಿ)ನ್ನು ತಲುಪಿದೆ. ಇದು ವಿಶ್ವಸಂಸ್ಥೆಯ ಶಾಂತಿ ಪಾಲನಾ ಕಾರ್ಯಾಚರಣೆಯ ವಾರ್ಷಿಕ ಬಜೆಟ್‌ನ 50 ಪಟ್ಟು ಆಗಿದೆ.
ಅಮೆರಿಕದ 10 ಮತ್ತು ಚೀನಾದ ಮೂರು ಕಂಪೆನಿಗಳು ಅಗ್ರ 10 ಕಂಪೆನಿಗಳ ಪಟ್ಟಿಯಲ್ಲಿದ್ದವು. ಬ್ರಿಟನ್‌ನ ಬಿಎಇ ಸಿಸ್ಟಮ್ಸ್ ಏಳನೇ ಸ್ಥಾನದಲ್ಲಿತ್ತು.





