ಸಿ.ಎಂ.ಇಬ್ರಾಹಿಂ ಭೇಟಿಯಾಗಿ ಮತ್ತೆ ಜೆಡಿಎಸ್ ಗೆ ಬರುವಂತೆ ಆಹ್ವಾನ ನೀಡಿದ ಕುಮಾರಸ್ವಾಮಿ

ಬೆಂಗಳೂರು, ಡಿ.7: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಅವರನ್ನು ಸೋಮವಾರ ಬೆನ್ಸನ್ ಟೌನ್‍ನಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಕಳೆದೆರಡು ದಿನಗಳಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರಗಳನ್ನು ನಡೆಸುತ್ತಿರುವ ಕುಮಾರಸ್ವಾಮಿ, ಇವತ್ತು ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಇಬ್ರಾಹಿಂ ಅವರನ್ನು ಭೇಟಿಯಾಗಿ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾವು ರಾಜಕಾರಣಕ್ಕೆ ಬರುವ ಮುಂಚೆಯೆ ಇಬ್ರಾಹಿಂ ಅವರು ದೇವೇಗೌಡರ ಜೊತೆ ಇದ್ದರು. ಅವರು ಯಾವುದೇ ಪಕ್ಷದಲ್ಲಿ ಇದ್ದರು ನಮ್ಮ ಕುಟುಂಬದ ಹಿರಿಯ ಸದಸ್ಯರಿದ್ದಂತೆ. 2004ರಲ್ಲಿ ಇಬ್ರಾಹಿಂ ನಮ್ಮಿಂದ ದೂರ ಆದರು ಸಹ ನಮ್ಮ ಕುಟುಂಬದ ಜೊತೆ ಆತ್ಮೀಯ ಸಂಬಂಧವನ್ನು ಮುಂದುವರಿಸಿಕೊಂಡಿದ್ದರು ಎಂದರು.
ರಾಜಕೀಯ ವಿಚಾರವನ್ನು ಚರ್ಚೆ ಮಾಡಲು ಇಲ್ಲಿಗೆ ಬಂದಿದ್ದೆ. ನಮ್ಮ ಪಕ್ಷವನ್ನು ಬಿಟ್ಟು ಹೋದ ನಂತರ ಅವರನ್ನು ಕಾಂಗ್ರೆಸ್ ಪಕ್ಷ ಹಾಗೂ ಅವರ ಸ್ನೇಹಿತರು ಯಾವ ರೀತಿ ನಡೆಸಿಕೊಂಡಿದ್ದಾರೆ, ಅವರಿಗೆ ಯಾವ ಸ್ಥಾನ ಮಾನ ನೀಡಿದ್ದಾರೆ ಎಂಬುದು ಗೊತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
1994ರಂತೆ ಮತ್ತೆ ಜೆಡಿಎಸ್ ಪಕ್ಷದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವಂತೆ ನಿಮ್ಮ ಹಳೆಯ ಮನೆಗೆ ವಾಪಸ್ ಬನ್ನಿ ಎಂದು ಇಬ್ರಾಹಿಂ ಅವರಿಗೆ ಮನವಿ ಮಾಡಿದ್ದೇನೆ. ಸೂಕ್ತವಾದ ಸಂದರ್ಭದಲ್ಲಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕೊಡುಗೆ ಏನು ಇಲ್ಲ. ಆದರೆ, ಸಿ.ಎಂ.ಇಬ್ರಾಹಿಂ ಅವರ ಕೊಡುಗೆ ಇದೆ ಎಂದು ಕುಮಾರಸ್ವಾಮಿ ಹೇಳಿದರು.
ಜೆಡಿಎಸ್‍ನಲ್ಲಿ ನಾನಿದ್ದಾಗ 58 ಸ್ಥಾನಗಳನ್ನು ಗೆದ್ದಿದ್ದೆವು. ಆದರೆ, ಆನಂತರ ಜೆಡಿಎಸ್ 28 ಸ್ಥಾನಗಳಿಗೆ ಕುಸಿದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಒಬ್ಬರೇ ಅಲ್ಲ ಅವರೊಂದಿಗೆ ಪಕ್ಷದಲ್ಲಿ ಮುಖಂಡರಾದ ಸಿ.ಎಂ.ಇಬ್ರಾಹಿಂ, ಪಿ.ಜಿ.ಆರ್.ಸಿಂಧ್ಯಾ, ಎಂ.ಪಿ.ಪ್ರಕಾಶ್ ಸೇರಿದಂತೆ ಎಲ್ಲರೂ ಇದ್ದರು. ನಾನು ಏಕಾಂಗಿ ಹೋರಾಟ ಮಾಡುತ್ತೇನೆ. ಕಾಂಗ್ರೆಸ್‍ನಿಂದ ಸಿದ್ದರಾಮಯ್ಯ ಹೊರಗೆ ಬಂದು ಏಕಾಂಗಿಯಾಗಿ ಚುನಾವಣೆ ಎದುರಿಸಿ ನಾಲ್ಕು ಸ್ಥಾನ ಗೆಲ್ಲಲಿ ನೋಡೋಣ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಸಿ.ಎಂ.ಇಬ್ರಾಹಿಂ ಮಾತನಾಡಿ, ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಡಿಸೆಂಬರ್ 15 ರ ನಂತರ ನಾನು ರಾಜ್ಯ ಪ್ರವಾಸ ಮಾಡಿ ಮುಂದಿನ ರಾಜಕೀಯದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ. ನಾನು ಯಾರನ್ನು ಬಿಟ್ಟು ಹೋಗಿಲ್ಲ. ಕೆಲವರು ನನ್ನನ್ನು ಬಿಟ್ಟು ಹೋದರು ಎಂದರು.
ಸಿದ್ದರಾಮಯ್ಯ ಬಗ್ಗೆ ನಾನು ಏನು ಮಾತನಾಡಲ್ಲ. ಅವರ ಅಭಿರುಚಿ ಬದಲಾಗಿದೆ. ಅವರು ನನ್ನನ್ನ ಕೈ ಬಿಟ್ಟಿದ್ದಾರಾ ಇಲ್ಲವ ಅವರನ್ನೇ ಕೇಳಿ. ನಾನು ದೂರ ಸರಿದು ತುಂಬಾ ಸಮಯ ಆಯಿತು. ಸಿದ್ದರಾಮಯ್ಯ ಎಲ್ಲೊ, ಇಬ್ರಾಹಿಂ ಅಲ್ಲೇ ಅನ್ನೋದು ಇತ್ತು. ಈಗ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಸಿದ್ದರಾಮಯ್ಯ ಅವರನ್ನೇ ಕೇಳಬೇಕು ಎಂದು ಇಬ್ರಾಹಿಂ ಹೇಳಿದರು.







