ಪೊಲೀಸರ ಮೇಲೆ ಹಲ್ಲೆ ಆರೋಪ: ವಿಧಾನ ಪರಿಷತ್ ಸದಸ್ಯನ ಪುತ್ರ ಸೇರಿ ಮೂವರು ವಶಕ್ಕೆ

ಬೆಂಗಳೂರು, ಡಿ.7: ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರ ಪುತ್ರ ಸೇರಿ ಮೂವರನ್ನು ಇಲ್ಲಿನ ಹೆಬ್ಬಾಳ ಠಾಣಾ ಪೊಲೀಸರು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ನಸೀರ್ ಅಹ್ಮದ್ ಪುತ್ರ ಫಯಾಝ್ ಅಹ್ಮದ್, ಇಮ್ರಾನ್ ಶರೀಫ್ ಮತ್ತು ಝೈನ್ ಶರೀಫ್ ಎಂಬುವವರನ್ನು ವಶಕ್ಕೆ ಪಡೆದು, ಕಾರು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ರವಿವಾರ ರಾತ್ರಿ ಹೆಬ್ಬಾಳ ಸಮೀಪದ ಬಿಎಂಟಿಸಿ ಬಸ್ ಘಟಕದ ಬಳಿ ಪಾನಮತ್ತರಾಗಿದ್ದ ಫಯಾಝ್ ಅಹ್ಮದ್ ಹಾಗೂ ಅವರ ಇಬ್ಬರು ಸ್ನೇಹಿತರು ಕಾರಿನಲ್ಲಿ ಬರುತ್ತಿದ್ದರು. ಈ ಬಗ್ಗೆ ಅನುಮಾನಗೊಂಡ ಗಸ್ತಿನಲ್ಲಿದ್ದ ಇಬ್ಬರು ಪೊಲೀಸರು, ಕಾರು ತಡೆದು ಪರಿಶೀಲನೆ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ.
ಮೂವರು ಮದ್ಯ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅದನ್ನು ಪೊಲೀಸರು ಪ್ರಶ್ನಿಸಿದ್ದರು. ಈ ವೇಳೆ, ಪೊಲೀಸರ ಮೇಲೆಯೇ ಹರಿಹಾಯ್ದಿದ್ದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಸಮವಸ್ತ್ರ ಹಿಡಿದು ಎಳೆದಾಡಿ ಹಲ್ಲೆ ಸಹ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ತದನಂತರ ಗಸ್ತಿನಲ್ಲಿದ್ದ ಸಿಬ್ಬಂದಿ ಠಾಣೆಗೆ ಕರೆ ಮಾಡಿ, ಹೆಚ್ಚುವರಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಮೂವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು ಎಂದು ತಿಳಿದುಬಂದಿದೆ.





