ಭತ್ತೆ ಸೇರಿ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೈದ್ಯರ ಧರಣಿ

ಬೆಂಗಳೂರು, ಡಿ.7: ಕೋವಿಡ್-19 ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ವೈದ್ಯರಿಗೆ ಭತ್ತೆ ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಬೇಕೆಂದು ಆಗ್ರಹಿಸಿ ವೈದ್ಯರು ಪ್ರತಿಭಟನೆ ನಡೆಸಿದರು.
ಸೋಮವಾರ ನಗರದ ಪುರಭವನ ಮುಂಭಾಗ ಜಮಾಯಿಸಿದ ವೈದ್ಯರು, ವಿವಿಧ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ರಾಜ್ಯ ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ, ಮುಷ್ಕರ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ರಾಜ್ಯ ಸರಕಾರ 9 ತಿಂಗಳು ನಮ್ಮನ್ನು ಕೋವಿಡ್ ಕೆಲಸದಲ್ಲಿ ದುಡಿಸಿಕೊಂಡಿದೆ. ಹಾಗಾಗಿ ನಮಗೆ ಕೋವಿಡ್ ಭತ್ತೆ ನೀಡಬೇಕು. ಶಾಲಾ ಮಕ್ಕಳ ಬಳಿ ಶುಲ್ಕ ಪಡೆಯಬೇಡಿ ಎಂದು ಸರಕಾರ ತಾಕೀತು ಮಾಡಿದೆ. ಮತ್ತೊಂದೆಡೆ, ವೈದ್ಯಕೀಯ ವಿದ್ಯಾರ್ಥಿಗಳ ಬಳಿ ಶುಲ್ಕ ಕಟ್ಟುವಂತೆ ಹೇಳುತ್ತದೆ. ಇದು ಯಾವ ರೀತಿ ನ್ಯಾಯ ಎಂದು ಪ್ರತಿಭಟನಾನಿರತ ಡಾ. ದಯಾನಂದ ಸಾಗರ್ ಪ್ರಶ್ನಿಸಿದರು.







