ಪಾಕ್: ನಾಳೆ ಪ್ರತಿಪಕ್ಷ ನಾಯಕರಿಂದ ಸಾಮೂಹಿಕ ರಾಜೀನಾಮೆ?
ಮರ್ಯಮ್ ನವಾಝ್ ಸುಳಿವು

ಮರ್ಯಮ್ ನವಾಝ್
ಲಾಹೋರ್ (ಪಾಕಿಸ್ತಾನ), ಡಿ. 7: ಪಾಕಿಸ್ತಾನದ 11 ಪಕ್ಷಗಳನ್ನೊಳಗೊಂಡ ಪ್ರತಿಪಕ್ಷ ಒಕ್ಕೂಟವಾಗಿರುವ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ಮೆಂಟ್ (ಪಿಡಿಎಮ್) ಮಂಗಳವಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ ಎಂದು ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಮ್ಎಲ್-ಎನ್) ಪಕ್ಷದ ಉಪಾಧ್ಯಕ್ಷೆ ಮರ್ಯಮ್ ನವಾಝ್ ರವಿವಾರ ಘೋಷಿಸಿದ್ದಾರೆ.
ಒಕ್ಕೂಟದ ಸದಸ್ಯರು ತಮ್ಮ ಶಾಸನ ಸಭೆಗಳಿಗೆ ಸಾಮೂಹಿಕ ರಾಜೀನಾಮೆಯನ್ನು ನೀಡಲಿದ್ದಾರೆ ಎನ್ನುವ ಸುಳಿವನ್ನು ಅವರು ನೀಡಿದ್ದಾರೆ.
ಲಾಹೋರ್ನಲ್ಲಿ ಸಾಮಾಜಿಕ ಮಾಧ್ಯಮ ಕಾರ್ಯಕರ್ತರ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದ ಮರ್ಯಮ್ ನವಾಝ್, ‘‘ಶಾಸನ ಸಭೆಗಳಿಗೆ ರಾಜೀನಾಮೆ ನೀಡಬೇಕು ಎಂದು ನಾವು ಕರೆ ನೀಡಿದರೆ, ನೀವು ನಮ್ಮೊಂದಿಗೆ ನಿಲ್ಲಲು ಸಿದ್ಧರಿರಬೇಕು. ಯಾವುದೇ ಒತ್ತಡಕ್ಕೆ ನೀವು ಒಳಗಾಗಬಾರದು’’ ಎಂಬುದಾಗಿ ಪ್ರಾಂತೀಯ ಶಾಸನ ಸಭೆಗಳು ಮತ್ತು ನ್ಯಾಶನಲ್ ಅಸೆಂಬ್ಲಿ ಸದಸ್ಯರಿಗೆ ಕರೆ ನೀಡಿದರು ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.
ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರಕಾರ ದಾಖಲಿಸುವ ಯಾವುದೇ ಮೊಕದ್ದಮೆಗಳನ್ನು ಪಕ್ಷದ ಕಾರ್ಯಕರ್ತರು ಸ್ವೀಕರಿಸಬೇಕು ಎಂದು ಹೇಳಿದ ಅವರು, ಸರಕಾರವು ಪ್ರತಿಪಕ್ಷದ ಬಗ್ಗೆ ಎಷ್ಟು ಭಯ ಹೊಂದಿದೆ ಎನ್ನುವುದನ್ನು ಜನರು ತಿಳಿದುಕೊಳ್ಳಬೇಕು ಎಂದರು. ಸರಕಾರವು ಜನರ ವಿರುದ್ಧ ಮೊಕದ್ದಮೆಗಳನ್ನಷ್ಟೇ ದಾಖಲಿಸಬಹುದು ಎಂದು ಅವರು ನುಡಿದರು.
‘‘ಈ ಆರೋಪಪಟ್ಟಿಗಳನ್ನು ನೀವು ಸ್ವೀಕರಿಸಬೇಕು, ಅವುಗಳನ್ನು ಒಟ್ಟಿಗೆ ಜೋಡಿಸಬೇಕು ಹಾಗೂ ಹೂಮಾಲೆಯಂತೆ ಹೆಮ್ಮೆಯಿಂದ ಧರಿಸಬೇಕು’’ ಎಂದು ಮರ್ಯಮ್ ಹೇಳಿದರು.
ಮಂಗಳವಾರ ಪ್ರತಿಪಕ್ಷ ಒಕ್ಕೂಟದ ಸದಸ್ಯರ ಸಭೆ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಮರ್ಯಮ್ ನವಾಝ್ ಈ ಹೇಳಿಕೆ ನೀಡಿದ್ದಾರೆ.