ನಟಿ ಸಂಜನಾ ಗಲ್ರಾನಿ ಆರೋಗ್ಯ ತಪಾಸಣೆಗೆ ಹೈಕೋರ್ಟ್ ಆದೇಶ

ಬೆಂಗಳೂರು, ಡಿ.7: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ನಟಿ ಸಂಜನಾ ಆರೋಗ್ಯ ತಪಾಸಣೆ ಮಾಡಿ, ವರದಿ ಸಲ್ಲಿಸಲು ಆದೇಶಿಸಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಆಸ್ಪತ್ರೆಯಲ್ಲಿ ಸಂಜನಾ ಅವರ ಆರೋಗ್ಯದ ಬಗ್ಗೆ ತಪಾಸಣೆ ನಡೆಸಿ, ಅದರ ವರದಿ ಸಲ್ಲಿಸುವಂತೆ ಆದೇಶಿಸಿತು.
ಹೀಗಾಗಿ ನಟಿ ಸಂಜನಾ ಜಾಮೀನು, ಇದೀಗ ಆರೋಗ್ಯ ತಪಾಸಣೆಯ ಮೇಲೆ ನಿಂತಿದೆ. ನಿಜಕ್ಕೂ ಅವರಿಗೆ ಅನಾರೋಗ್ಯ ಇರುವುದಾದರೇ ಹೈಕೋರ್ಟ್ ನ್ಯಾಯಪೀಠವು ಜಾಮೀನು ಮಂಜೂರು ಮಾಡಬಹುದು. ಇಲ್ಲವೇ ಸುಳ್ಳು ಎಂದಾದರೆ ಮತ್ತೆ ಜೈಲೇ ಗತಿ ಎನ್ನುವಂತಾಗಲಿದೆ.
ವಕೀಲ ಅಸ್ಮತ್ ಪಾಷಾ ಅವರು ವಾದಿಸಿ, ಸಂಜನಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. 2018ರಲ್ಲಿ ಸರ್ಜರಿಗೂ ಒಳಗಾಗಿದ್ದು, 2019ರಿಂದ ಅಸ್ತಮಾ ಹಾಗೂ ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ. ಚಳಿಗಾಲದಲ್ಲಿ ಸಮಸ್ಯೆ ತೀವ್ರವಾಗುವ ಕಾರಣ, ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ, ಜಾಮೀನು ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಸರಕಾರದ ಪರ ವಾದಿಸಿದ ವಕೀಲ ವೀರಣ್ಣ ತಿಗಡಿ ಅವರು, ಅನಾರೋಗ್ಯದ ನೆಪಕ್ಕೆ ಜಾಮೀನು ನೀಡಿದರೆ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಸಂಜನಾ ಆರೋಗ್ಯ ತಪಾಸಣೆಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.







