ಭಾರತ್ ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ: ಉಡುಪಿಯಲ್ಲಿ ಬಸ್ ಬಂದ್ ಇಲ್ಲ
ಬಿಗಿ ಪೊಲೀಸ್ ಬಂದೋಬಸ್ತ್
ಉಡುಪಿ, ಡಿ.7: ಕೇಂದ್ರ ಸರಕಾರದ ರೈತ ವಿರೋಧಿ ಕಾಯಿದೆಗಳನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ವಿವಿಧ ರೈತ ಸಂಘಗಳು ಕರೆ ನೀಡಿರುವ ಭಾರತ ಬಂದ್‌ಗೆ ಜಿಲ್ಲೆಯ ಸಿಐಟಿಯು, ಕಿಸಾನ್ ಕಾಂಗ್ರೆಸ್, ಕರ್ನಾಟಕ ಪ್ರಾಂತ ರೈತ ಸಂಘ, ಭಾರತ ರಾಷ್ಟ್ರೀಯ ಕಾಂಗ್ರೆಸ್, ಸಿಪಿಐಎಂ, ಜಿಲ್ಲಾ ಮುಸ್ಲಿಮ್ ಒಕ್ಕೂಟ, ದಸಂಸ ಅಂಬೇಡ್ಕರ್ ವಾದ, ಸಹಬಾಳ್ವೆ, ಕೃಷಿ ಕೂಲಿಕಾರರ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ.
ಈ ಪ್ರಯುಕ್ತ ವಿವಿಧ ಸಂಘಟನೆಗಳು ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಸಂಜೆ 4 ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಅದೇ ರೀತಿ ಕುಂದಾಪುರ ಶಾಸ್ತ್ರಿ ಸರ್ಕಲ್ ಮತ್ತು ಬೈಂದೂರು ಅಂಡರ್‌ಪಾಸ್ ಬಳಿಯೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ ಎಂದು ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಬಸ್ ಬಂದ್ ಇಲ್ಲ: ಭಾರತ್ ಬಂದ್ ಪ್ರಯುಕ್ತ ಉಡುಪಿ ಜಿಲ್ಲೆಯಲ್ಲಿ ಸರ್ವಿಸ್ ಹಾಗೂ ಸಿಟಿ ಬಸ್ ಬಂದ್ ಇರುವುದಿಲ್ಲ. ಎಲ್ಲ ಬಸ್‌ಗಳು ಎಂದಿ ನಂತೆ ಓಡಾಟ ನಡೆಸಲಿವೆ ಎಂದು ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಸಿಟಿಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಬಿಗಿ ಬಂದೋಬಸ್ತ್: ಬಂದ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಮೂರು ಪೊಲೀಸ್ ಉಪವಿಭಾಗದಲ್ಲಿಯೂ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ತಿಳಿಸಿದ್ದಾರೆ.
ಮುಂಜಾಗತ್ರಾ ಕ್ರಮವಾಗಿ ಜಿಲ್ಲೆಯಲ್ಲಿ ಎರಡು ಕೆಎಸ್‌ಆರ್‌ಪಿ ಹಾಗೂ ಆರು ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿಯಲ್ಲಿ ನಿಯೋಜಿಸಲಾಗಿದೆ. ಅಲ್ಲದೆ ಆಯಾ ಪೊಲೀಸ್ ಠಾಣೆಗಳಲ್ಲಿ ಉಪನಿರೀಕ್ಷಕರ ನೇತೃತ್ವದಲ್ಲಿ ಬಂದೋಬಸ್ಥ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.







