ಹಾಂಕಾಂಗ್ ವಿವಾದ: ಚೀನಾ ಅಧಿಕಾರಿಗಳ ವಿರುದ್ಧ ಅಮೆರಿಕ ದಿಗ್ಬಂಧನ?

ವಾಶಿಂಗ್ಟನ್, ಡಿ. 7: ಹಾಂಕಾಂಗ್‌ನಲ್ಲಿ ಪ್ರತಿಪಕ್ಷ ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾದ ಚೀನಾದ ಕನಿಷ್ಠ 14 ಅಧಿಕಾರಿಗಳ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಲು ಅಮೆರಿಕ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಸರಕಾರವು ಅಧಿಕಾರದ ಕೊನೆಯ ವಾರಗಳಲ್ಲಿದ್ದು, ಚೀನಾ ಕಮ್ಯುನಿಸ್ಟ್ ಪಕ್ಷದ ಅಧಿಕಾರಿಗಳನ್ನು ಗುರಿಯಾಗಿಸುವ ಮೂಲಕ ಚೀನಾದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿದೆ.
ನಿಯೋಜಿತ ಅಧ್ಯಕ್ಷ ಜೋ ಬೈಡನ್ ಜನವರಿ 20ರಂದು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಚೀನಾದ ಸಂಸತ್ತು ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷದ ಅಧಿಕಾರಿಗಳು ಸೇರಿದಂತೆ ಸುಮಾರು 14 ಜನರ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಲು ಅಮೆರಿಕ ಯೋಚಿಸುತ್ತಿದೆ. ಈ ಅಧಿಕಾರಿಗಳ ಅಮೆರಿಕದಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕುವುದು ಹಾಗೂ ಅವರೊಂದಿಗೆ ಯಾರೂ ಆರ್ಥಿಕ ವ್ಯವಹಾರಗಳನ್ನು ನಡೆಸದಂತೆ ತಡೆಯುವುದು ಆರ್ಥಿಕ ದಿಗ್ಬಂಧನದಲ್ಲಿ ಸೇರಿದೆ.
ದಿಗ್ಬಂಧನಕ್ಕೊಳಗಾಗುವ ಅಧಿಕಾರಿಗಳಲ್ಲಿ ಹಾಂಕಾಂಗ್ ಅಧಿಕಾರಿಗಳು ಮತ್ತು ಮಾತೃಭೂಮಿ ಚೀನಾದ ಅಧಿಕಾರಿಗಳು ಸೇರಿದ್ದಾರೆ ಎಂದು ಮೂಲಗಳು ಹೇಳಿವೆ.







