ಡಿ.15ರೊಳಗೆ ಶಾಲೆ ತೆರೆಯದೇ ಇದ್ದರೆ ಸಮಿತಿಯಿಂದಲೇ ಶಾಲೆಗಳ ಆರಂಭ: 'ಮಕ್ಕಳ ನಡೆ-ಶಾಲೆಯ ಕಡೆ' ಅಭಿಯಾನದಿಂದ ಎಚ್ಚರಿಕೆ

ಬೆಂಗಳೂರು, ಡಿ.7: ಕೋವಿಡ್ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಹೀಗಾಗಿ, ಡಿ.15ರೊಳಗೆ ರಾಜ್ಯದ ಎಲ್ಲ ಶಾಲೆಗಳನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಿ ಮಕ್ಕಳ ನಡೆ-ಶಾಲೆಯ ಕಡೆ ಅಭಿಯಾನ ಸಮಿತಿಯು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದಿದೆ.
ಶಾಲೆಗಳನ್ನು ಏಕೆ ಪ್ರಾರಂಭಿಸಬೇಕೆಂಬ ಬಗ್ಗೆಯೂ ಆ ಪತ್ರದಲ್ಲಿ ವಿವರಣೆ ನೀಡಿರುವ ಸಮಿತಿಯು ಡಿ.15ರೊಳಗೆ ಶಾಲೆಗಳು ಆರಂಭವಾಗದಿದ್ದರೆ ಡಿ.16ರಂದು ಶಾಲೆಗಳನ್ನು ನಾವೇ ತೆರೆದು ಎಲ್ಲ ಮಕ್ಕಳಿಗೆ ಪಾಠಗಳನ್ನೂ, ಬಿಸಿಯೂಟವನ್ನೂ ಆರಂಭಿಸಲಿದ್ದೇವೆ ಎಂದು ಸಮಿತಿಯು ತಿಳಿಸಿದೆ.
ಪತ್ರದಲ್ಲಿ ಏನಿದೆ: ಬಾಲವಾಡಿಯಿಂದ 12ನೆ ತರಗತಿಯವರೆಗೆ ಎಲ್ಲ ಶಾಲೆಗಳನ್ನು ಡಿ.15ರೊಳಗಾಗಿ ಪೂರ್ಣ ಪ್ರಮಾಣದಲ್ಲಿ ಆರಂಭಿಸಬೇಕು. 2020-21 ಶೈಕ್ಷಣಿಕ ವರ್ಷವೆಂದು ಶಾಲೆಗಳನ್ನು ನಡೆಸಿ 180 ದಿನಗಳ ಕಾಲಾವಕಾಶದಲ್ಲಿ ಎಲ್ಲ ಪಾಠಗಳನ್ನು ಬೋಧಿಸುವುದಕ್ಕೆ ಸಾಧ್ಯವಿದೆ. ಈ ಶೈಕ್ಷಣಿಕ ವರ್ಷವನ್ನು 2020ರ ಡಿ.15ರಿಂದ 2021ರ ಜೂ.15ರವರೆಗೆ ಎಂದು ಪರಿಗಣಿಸಬೇಕು. ಆ ಬಳಿಕ ಪರೀಕ್ಷೆಗಳನ್ನು ನಡೆಸಿ, ಜುಲೈ 2021ರಿಂದ ಮುಂದಿನ ಶೈಕ್ಷಣಿಕ ವರ್ಷವನ್ನು ಆರಂಭಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.







