ಡಬ್ಲ್ಯುಎಚ್‌ಓ ಪ್ರತಿಷ್ಠಾನದ ಸಿಇಓ ಆಗಿ ಭಾರತೀಯ ಮೂಲದ ಅನಿಲ್ ಸೋನಿ ನೇಮಕ

ನ್ಯೂಯಾರ್ಕ್, ನ.6: ವಿಶ್ವ ಆರೋಗ್ಯ ಸಂಸ್ಥೆ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಭಾರತೀಯ ಮೂಲದ ಅನಿಲ್ ಸೋನಿ ಅವರನ್ನು ಸೋಮವಾರ ನೇಮಿಸಲಾಗಿದೆ.
ಬಹುರಾಷ್ಟ್ರೀಯ ಫಾರ್ಮಾಸ್ಯೂಟಿಕಲ್‌ಸಂಸ್ಥೆ ವಿಯಾಟ್ರಿಸ್‌ನಲ್ಲಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ವಿಯಾಟ್ರಿಸ್‌ನಲ್ಲಿ ಅವರು ಜಾಗತಿಕ ಸಾಂಕ್ರಾಮಿಕ ರೋಗಗಳ ವಿಭಾಗದ ವರಿಷ್ಠರಾಗಿ ಸೇವೆ ಸಲ್ಲಿಸಿದ್ದರು.
ವಿಶ್ವ ಆರೋಗ್ಯಸಂಸ್ಥೆಗೆ ಆರ್ಥಿಕ ದೇಣಿಗೆಯನ್ನು ಹರಿದುಬರುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಡಬ್ಲ್ಯುಎಚ್‌ಓ ಪ್ರತಿಷ್ಠಾನವು ಹೊಂದಿದೆ. ಖಾಸಗಿ ಮೂಲಗಳಿಂದ ಅಧಿಕ ಪ್ರಮಾಣದ ದೇಣಿಗೆಯನ್ನು ತರುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಪ್ರತಿಷ್ಠಾನದ ಸಿಇಓ ಆಗಿ ಸೋನಿ ಅವರ ನೇಮಿಸಿದೆ ಎನ್ನಲಾಗಿದೆ. ಡಬ್ಲ್ಯುಎಚ್‌ಓ ಪ್ರತಿಷ್ಠಾನದ ನೂತನ ಸಿಇಓ ನೇಮಕವನ್ನು ವಿಶ್ವ ಆರೋಗ್ಯಸಂಸ್ಥೆಯ ವರಿಷ್ಠ ಡಾ. ಟೆಡ್ರೊಸ್ ಅದ್ನಾಮ್ ಗೆಬ್ರಾಯಿಸಸ್, ‘‘ಅನಿಲ್ ಸೋನಿ ಅವರು ಜಾಗತಿಕ ಆರೋಗ್ಯ ವಿಷಯಗಳಲ್ಲಿ ಅನ್ವೇಷಕಾರನಾಗಿ ತನ್ನ ಸಾಮರ್ಥ್ಯವನ್ನು ದೃಢಪಡಿಸಿದ್ದಾರೆ. ಎರಡು ದಶಕಗಳ ಕಾಲ ಎಚ್‌ಐವಿ/ಏಡ್ಸ್ ಮತ್ತಿತರ ಸೋಂಕು ರೋಗಳಿಂದ ಬಾಧಿತರಾದವರ ಸೇವೆಯಲ್ಲಿ ತೊಡಗಿದ್ದರು. ಡಬ್ಲ್ಯುಎಚ್‌ಓ ಪ್ರತಿಷ್ಠಾನಕ್ಕೆ ಅವರ ನಾಯಕತ್ವವು ವಿಶ್ವ ಆರೋಗ್ಯ ಸಂಸ್ಥೆಯ ಧ್ಯೇಯಕ್ಕೆ ಹಾಗೂ ಅದನ್ನು ಅವಲಭಿಸಿರುವ ಕೋಟ್ಯಂತರ ಜನರಿಗೆ ಅಮೂಲ್ಯವಾದ ಬೆಂಬಲವನ್ನು ನೀಡಲಿದೆ’’ಎಂದು ಹೇಳಿದ್ದಾರೆ.
ಕೊರೋನ ವೈರಸ್ ಹಾವಳಿಯ ಸಂದರ್ಭದಲ್ಲೇ ಡೊನಾಲ್ಡ್ ಟ್ರಂಪ್ ಆಡಳಿತವು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆದಿರುವುದು, ಡಬ್ಲ್ಯುಎಚ್‌ಓನ ದುರ್ಬಲ ಆರ್ಥಿಕ ನೆಲೆಗಟ್ಟನ್ನು ಅನಾವರಣಗೊಳಿಸಿತ್ತು.