ಪಿಂಚಣಿ ಹಣ ಬಿಡುಗಡೆ ಮಾಡಲು ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಡಿ.7: ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಹಣವನ್ನು ಬಿಡುಗಡೆ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು.
ಸೋಮವಾರ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ರವೀಂದ್ರ ಶ್ರೀಕಂಠಯ್ಯ, ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಯನ್ನು ಪಡೆಯುತ್ತಿರುವ ವೃದ್ಧರು ಮತ್ತು ಮಹಿಳೆಯರಿಗೆ ಸಮರ್ಪಕವಾಗಿ ಹಾಗೂ ನಿಗದಿತ ಸಮಯದಲ್ಲಿ ಪಿಂಚಣಿ ಸಿಗದೆ ಇರುವ ಬಗ್ಗೆ ಗಮನ ಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಿದ ವಿಷಯಕ್ಕೆ ಮುಖ್ಯಮಂತ್ರಿ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಕಂದಾಯ ಸಚಿವ ಆರ್.ಅಶೋಕ್ ಪರವಾಗಿ ಸದನದಲ್ಲಿ ಉತ್ತರ ನೀಡಿದ ವಸತಿ ಸಚಿವ ವಿ.ಸೋಮಣ್ಣ, ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧರು, ವಿಧವೆಯರು, ಅಂಗವಿಕಲರು ಸೇರಿದಂತೆ ಸುಮಾರು 67 ಲಕ್ಷ ಜನ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ. ಅವರಿಗೆ ಅಂಚೆ ಇಲಾಖೆಯ ಮೂಲಕ ಪಿಂಚಣಿಯನ್ನು ತಲುಪಿಸಲಾಗುತ್ತಿದೆ ಎಂದರು.
ಆದರೆ, 6.64 ಲಕ್ಷ ಮಂದಿಗೆ ತಾತ್ಕಾಲಿಕವಾಗಿ ಪಿಂಚಣಿ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಈ ಪೈಕಿ 1.56 ಲಕ್ಷ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಳಾಸ ಬದಲಾವಣೆ, ಆಧಾರ್ ಸಂಖ್ಯೆ, ಪಿನ್ ಕೋಡ್ ಬದಲಾವಣೆ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ತಡೆ ಹಿಡಿಯಲಾಗಿತ್ತು. ಅಧಿಕಾರಿಗಳು ಭೌತಿಕ ಪರಿಶೀಲನೆ ಮಾಡಿದ ಬಳಿಕ ಅವರ ಪಿಂಚಣಿಯನ್ನು ತಲುಪಿಸುವ ವ್ಯವಸ್ಥೆ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವೃದ್ಧಾಪ್ಯವೇತನ, ವಿಧವಾ ವೇತನ ಕಳೆದ 7-8 ತಿಂಗಳಿನಿಂದ ಲಕ್ಷಾಂತರ ಜನರಿಗೆ ಸಿಗುತ್ತಿಲ್ಲ. ಇವೆಲ್ಲವೂ ಹೊಸದಾಗಿ ಮಂಜೂರು ಆಗಿರುವ ಪ್ರಕರಣಗಳಲ್ಲ. ಬಹಳ ವರ್ಷಗಳಿಂದ ಅವರಿಗೆ ಪಿಂಚಣಿ ಪಾವತಿ ಆಗುತ್ತಿತ್ತು. ಇದೀಗ ಏಕಾಏಕಿ ತಡೆ ಹಿಡಿದಿರುವುದು ಸರಿಯಲ್ಲ. ಈಗಾಗಲೆ ಕೊರೋನದಿಂದ ಬಡವರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುವ ಅಗತ್ಯವಿಲ್ಲ. ಸ್ಥಗಿತವಾಗಿರುವ ಪಿಂಚಣಿ ಹಣ ಬಿಡುಗಡೆಗೆ ಸರಕಾರ ಆದೇಶ ಹೊರಡಿಸಿದರೆ ಸಾಕು ಎಂದರು.
ವ್ಯವಸ್ಥೆಯ ದೌರ್ಬಲ್ಯ ಕಾಣುತ್ತಿದೆ: ಸ್ಪೀಕರ್
ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಲಕ್ಷಾಂತರ ಜನರಿಗೆ ಸಿಗುತ್ತಿಲ್ಲ ಎಂದರೆ ಸರಕಾರದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ಭಾವನೆ ಬರುತ್ತದೆ. ಆಡಳಿತದಲ್ಲಿನ ಗೊಂದಲದಿಂದ ಜನರಿಗೆ ಸೌಲಭ್ಯ ತಲುಪದಿರುವುದು ಸರಿಯಲ್ಲ. ಸಚಿವ ಸಂಪುಟ ಸಭೆ ಅಥವಾ ಸರಕಾರದ ಮಟ್ಟದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲಿ ವ್ಯವಸ್ಥೆಯ ದೌರ್ಬಲ್ಯ ಎದ್ದು ಕಾಣುತ್ತಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್







