ಮಳೆ ಹಾನಿ ಪರಿಹಾರ, ರಸ್ತೆ ದುರಸ್ಥಿ ಬಗ್ಗೆ ಸರಕಾರಕ್ಕೆ ಯು.ಟಿ.ಖಾದರ್ ಮನವಿ

ಬೆಂಗಳೂರು, ಡಿ.7: ಮಂಗಳೂರು ಹಾಗೂ ಉಡುಪಿ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ 162 ಕೋಟಿ ರೂ.ನಷ್ಟವಾಗಿರುವುದಾಗಿ ಸ್ಥಳೀಯ ಆಡಳಿತ ಮೂಲಕ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ, ಬಿಡುಗಡೆಯಾಗಿರುವುದು ಕೇವಲ 5 ಕೋಟಿ ರೂ.ಮಾತ್ರ ಎಂದು ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿದರು.
ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಅತಿವೃಷ್ಟಿ ಬಗ್ಗೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿಯೆ 160ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಆದರೆ, ಈವರೆಗೆ ಒಬ್ಬರಿಗೂ ಒಂದು ಪೈಸೆ ಪರಿಹಾರ ಸಿಕ್ಕಿಲ್ಲ. ಪ್ರತಿ ದಿನ ಜನ ಬಂದು ನಮ್ಮ ಮುಂದೆ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ ಆದಷ್ಟು ಬೇಗ ಇವರಿಗೆ ಪರಿಹಾರ ಬಿಡುಗಡೆ ಮಾಡಬೇಕು ಎಂದರು.
ಬೆಂಗಳೂರಿನಿಂದ ಮಂಗಳೂರು, ಚಿಕ್ಕಮಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವಂತಹ ಪ್ರಮುಖ ರಸ್ತೆಗಳೆ ಮಳೆಯಿಂದ ಹಾನಿಯಾಗಿವೆ. ಅವುಗಳ ದುರಸ್ಥಿಗೆ ಸರಕಾರ ಗಮನ ಹರಿಸಬೇಕು. ಬೆಳೆಗಳನ್ನು ಕಳೆದುಕೊಂಡಿರುವ ರೈತರಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು. ರೇಷನ್ ಕಾರ್ಡ್‍ಗೆ ಅರ್ಜಿ ಸ್ವೀಕರಿಸಲು ಈ ಸರಕಾರ ಸಿದ್ಧವಿಲ್ಲ. ಪಿಂಚಣಿ ಸೌಲಭ್ಯ ಕಳೆದ ಹಲವು ತಿಂಗಳಿಂದ ಸಿಗುತ್ತಿಲ್ಲ. ಬಡವರು ಯಾವ ರೀತಿ ತಮ್ಮ ಜೀವನ ಸಾಗಿಸಬೇಕು ಎಂದು ಯು.ಟಿ.ಖಾದರ್ ಪ್ರಶ್ನಿಸಿದರು.







