ಬದುಕಿನ ವಿಷಯ ಬಿಟ್ಟು, ಲವ್ ಜಿಹಾದ್, ಗೋಹತ್ಯೆ ವಿಷಯ ಏಕೆ: ನ್ಯಾ.ನಾಗಮೋಹನ್‍ದಾಸ್
ರಾಜ್ಯ, ಕೇಂದ್ರ ಸರಕಾರಗಳ ಕಾಯ್ದೆಗಳ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ

ಬೆಂಗಳೂರು, ಡಿ.7: ಆಡಳಿತ ನಡೆಸುತ್ತಿರುವ ಸರಕಾರಗಳು, ಬದುಕಿಗೆ ಬೇಕಾದ ವಿಷಯಗಳನ್ನು ಬಿಟ್ಟು ಲವ್ ಜಿಹಾದ್, ಗೋಹತ್ಯೆ ವಿಷಯಗಳಂತಹ ಭಾವನಾತ್ಮಕ ವಿಷಯಗಳ ಬಗ್ಗೆ ಕಾನೂನು ಜಾರಿಗೆ ಮುಂದಾಗಿದ್ದಾರೆ ಎಂದು ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೊಹನ್ ದಾಸ್ ಬೇಸರ ವ್ಯಕ್ತಪಡಿಸಿದರು.
ಸೋಮವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಮುಂಭಾಗ ರೈತ, ದಲಿತ, ಕಾರ್ಮಿಕ, ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರಗಳ ರೈತ, ದಲಿತ, ಕಾರ್ಮಿಕ ಕಾಯ್ದೆ, ಸುಗ್ರಿವಾಜ್ಞೆಗಳ ವಿರುದ್ಧ ನಡೆಸಿದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೃಷಿ ಬಿಕ್ಕಟ್ಟನ್ನು ಸರಿಪಡಿಸಿ ರೈತರ ಹಿತವನ್ನು ಕಾಪಾಡಿ ಎಂದರೆ ಅದರ ವಿರುದ್ಧ ಕಾನೂನುಗಳನ್ನು ಜಾರಿಗೊಳಿಸುತ್ತಾ ರೈತರನ್ನು ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಬದುಕಿಗೆ ಬೇಕಾದ ವಿಷಯಗಳನ್ನು ಬಿಟ್ಟು ಲವ್ ಜಿಹಾದ್, ಗೋಹತ್ಯೆ ವಿಷಯಗಳಂತಹ ಭಾವನಾತ್ಮಕ ವಿಷಯಗಳ ಬಗ್ಗೆ ಕಾನೂನು ಜಾರಿಗೆ ಮುಂದಾಗಿದ್ದಾರೆ. ಆದರೆ ಹದಿನೈದು ವರ್ಷದಿಂದ ಸ್ವಾಮಿನಾಥನ್ ಆಯೋಗದ ವರದಿ ಚರ್ಚೆಯಿಲ್ಲದೆ ಹಾಗೆ ಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನೂ ಕೂಡಾ ರೈತನ ಮಗನೆ. ರೈತರಿಗೆ ಆಗಿರುವ ಅನ್ಯಾಯವನ್ನು ನೋಡಿಕೊಂಡು ಸುಮ್ಮನಿರಲು ನನ್ನಿಂದ ಆಗಲಿಲ್ಲ. ಅದಕ್ಕೆ ನಾನಿಲ್ಲಿದ್ದೀನಿ. ಅಲ್ಲದೆ, ಇತ್ತೀಚಿಗೆ ಅಪ್ರಜಾಪ್ರಭುತ್ವ ಸುಧಾರಣೆಗಳು ಬರುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ ಎಂದರು.
ರೈತ ಹೋರಾಟಗಾರ ಪ್ರಕಾಶ್ ಕಮ್ಮರಡಿ ಮಾತನಾಡಿ, ಸಾಂಕ್ರಾಮಿಕದ ಸಮಯದಲ್ಲಿ ದೇಶದ ರೈತರು ಕೈಚೆಲ್ಲಿ ಕುಳಿತಿದ್ದು, ಇಂತಹ ಸಂದರ್ಭದಲ್ಲಿ ಕೃತಘ್ನ ಸರಕಾರ ರೈತರ ಆಶೋತ್ತರಗಳನ್ನು ಈಡೇರಿಸಬೇಕಿತ್ತು. ಆದರೆ ಸರಕಾರ ಆಶ್ವಾಸನೆ ಕೂಡಾ ಕೊಡುತ್ತಿಲ್ಲ. ಜೊತೆಗೆ ಯಾವುದೇ ಚರ್ಚೆಯಿಲ್ಲದೆ ರೈತ ವಿರೋಧಿ ಕಾನೂನನ್ನು ಜಾರಿಗೆ ತರುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಕಾರ್ಮಿಕ ಮುಖಂಡ ಮೈಕಲ್ ಫರ್ನಾಂಡಿಸ್, ದಲಿತ ಮುಖಂಡ ಎನ್.ವೆಂಕಟೇಶ್, ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್, ಮಾಜಿ ಶಾಸಕ ಬಿ.ಆರ್.ಪಾಟೀಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.






.jpg)
.jpg)
.jpg)

