ದೇಶದಲ್ಲಿ 152 ದಿನಗಳ ಕನಿಷ್ಠ ಮಟ್ಟಕ್ಕೆ ಇಳಿದ ಕೊರೋನ ಸೋಂಕು
ಹೊಸದಿಲ್ಲಿ : ದೇಶದ ದೈನಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ ಸೋಮವಾರ ಗಣನೀಯವಾಗಿ ಕಡಿಮೆಯಾಗಿದ್ದು, ಹೊಸ ಪ್ರಕರಣಗಳ ಸಂಖ್ಯೆ 152 ದಿನಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಅಂತೆಯೇ 389 ಮಂದಿ ಸೋಂಕಿಗೆ ಬಲಿಯಾಗಿದ್ದು, ಇದು 158 ದಿನಗಳಲ್ಲೇ ಕನಿಷ್ಠ.
ದೇಶಾದ್ಯಂತ ಸೋಮವಾರ 26,208 ಹೊಸ ಪ್ರಕರಣ ಕಂಡುಬಂದಿದ್ದು, ರವಿವಾರ ದಾಖಲಾದ 33,231 ಪ್ರಕರಣಗಳಿಗಿಂತ ಇದು ಶೇಕಡ 21ರಷ್ಟು ಕಡಿಮೆ. ಜುಲೈ 8ರ ಬಳಿಕ ಕನಿಷ್ಠ ಸಂಖ್ಯೆ ಸೋಮವಾರ ದಾಖಲಾಗಿದೆ. ಅಂದು 25,641 ಪ್ರಕರಣಗಳು ವರದಿಯಾಗಿದ್ದವು.
ವಾರಾಂತ್ಯದಲ್ಲಿ ನಡೆದ ಕಡಿಮೆ ಸಂಖ್ಯೆಯ ಪರೀಕ್ಷೆ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ವರದಿಯಾದ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಸೋಮವಾರ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವುದು ಸೋಂಕಿನ ಪ್ರಮಾಣ ಇಳಿಯುತ್ತಿರುವ ಸ್ಪಷ್ಟ ಸಂಕೇತ. ರವಿವಾರ ಪರೀಕ್ಷೆ ಕಡಿಮೆ ನಡೆದಿರುವುದು ಕೂಡಾ ಒಂದು ಕಾರಣ ಎಂದು ಉನ್ನತ ಮೂಲಗಳು ಹೇಳಿವೆ. ರವಿವಾರ ದೇಶಾದ್ಯಂತ ಕೇವಲ 8,01,081 ಕೋವಿಡ್ ಪರೀಕ್ಷೆ ನಡೆದಿದೆ. ಇದು ಸೆಪ್ಟೆಂಬರ್ 27ರ ಬಳಿಕ 10 ವಾರಗಳಲ್ಲೇ ಕನಿಷ್ಠ.
ಕೊರೋನ ವೈರಸ್ ಸೋಂಕಿನಿಂದ ಸೋಮವಾರ ಮೃತಪಟ್ಟವರ ಸಂಖ್ಯೆ ಕೂಡಾ ಜುಲೈ 2ರ ಬಳಿಕದ ಕನಿಷ್ಠ ಸಂಖ್ಯೆಯಾಗಿದೆ. ಏತನ್ಮಧ್ಯೆ ಹಿಂದಿನ ವಾರ (ನವೆಂಬರ್ 29- ಡಿಸೆಂಬರ್ 6) ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಕಳೆದ ವಾರ ಒಟ್ಟು 25,602 ಪ್ರಕರಣಗಳು ವರದಿಯಾಗಿದ್ದು, ಅದಕ್ಕೂ ಹಿಂದಿನ ವಾರಕ್ಕೆ ಹೋಲಿಸಿದರೆ ಇದು 11 ಸಾವಿರದಷ್ಟು ಕಡಿಮೆ.
ಇಡೀ ವಾರದಲ್ಲಿ ದೇಶಾದ್ಯಂತ ಹೊಸ ಪ್ರಕರಣಗಳ ಸಂಖ್ಯೆ ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 16ರಷ್ಟು ಕಡಿಮೆಯಾಗಿದೆ. 35 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಎಂಟರಲ್ಲಿ ಹಿಂದಿನ ವಾರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.